ಲಿಂ.ಜ.ಡಾ ತೋಂಟದ ಸಿದ್ಧಲಿಂಗ ಶ್ರೀಗಳ ಜನ್ಮದಿನವನ್ನು ಭಾವೈಕ್ಯ ದಿನ-ಶೀಘ್ರ ಆದೇಶ

Spread the love

ಗದಗನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ

 

ಪ್ರಜಾಪಥ ವಾರ್ತೆ

ಗದಗ :  ಜಗದ್ಗುರು ಡಾ: ತೋಂಟದಸಿದ್ಧಲಿಂಗ ಮಹಾಸ್ವಾಮೀಜಿಗಳ ಜನ್ಮದಿನವನ್ನು ಭಾವೈಕ್ಯ ದಿನವನ್ನಾಗಿ ಆಚರಿಸಲಾಗುವುದು. ಈ ಕುರಿತು  ಸರ್ಕಾರಿ ಆದೇಶವನ್ನು ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು  ತಿಳಿಸಿದರು.

ಅವರು ಇಂದು ಶ್ರೀ ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವ ಸಮಿತಿ, ಗದಗ ವತಿಯಿಂದ  ಆಯೋಜಿಸಿದ್ದ ತ್ರಿವಿಧ  ದಾಸೋಹಮೂರ್ತಿ ಪೂಜ್ಯ ಲಿಂಗೈಕ್ಯ ಶ್ರೀ ಜಗದ್ಗುರು ಡಾ: ತೋಂಟದ ಸಿದ್ಧಲಿಂಗಮಹಾಸ್ವಾಮೀಜಿಗಳ ಐಕ್ಯ ಮಂಟಪ  ಲೋಕಾರ್ಪಣೆ ಮಾಡಿ ಮಾತನಾಡಿದರು. ಅವರ ಜನ್ಮ ದಿನವನ್ನು ಅರ್ಥಪೂರ್ಣ ವಾಗಿ ಆಚರಿಸುವುದು ನಮ್ಮೆಲ್ಲರ ಕರ್ತವ್ಯ.

ಪರಮಪೂಜ್ಯರು ಜ್ಞಾನಿಗಳಾಗಿದ್ದರು. ಆಧ್ಯಾತ್ಮಿಕವಾಗಿ ಅವರ ಜ್ಞಾನ ಆಳವಾಗಿತ್ತು. ಆ ಆಳದ ಲೆಕ್ಕ ನಮಗ್ಯಾರಿಗೂ ಸಿಕ್ಕಿಲ್ಲ. ಅವರ ಲೌಕಿಕ ಜ್ಞಾನವೂ ಅಷ್ಟೇ ವಿಸ್ತಾರವಾಗಿತ್ತು. ಭಕ್ತರಿಗೆ ಜ್ಞಾನದ ಮೂಲಕ ಮಾರ್ಗದರ್ಶನ ಮಾಡಿದಾಗ ಅವರು ಸಂತೃಪ್ತರಾಗಿ ಬದುಕಿನ ಮಾರ್ಗವನ್ನು ಪಡೆದುಕೊಂಡು ಯಶಸ್ವಿಯಾಗಿದ್ದಾರೆ. ಪರಮಪೂಜ್ಯರ ಸಂಘಕ್ಕೆ ಬಂದವರು ಅಪಾರವಾದ ಪ್ರೀತಿ, ಆತ್ಮೀಯತೆ, ಆಶೀರ್ವಾದ ನೀಡಿದ್ದಾರೆ ಎಂದರು.

ಮನುಷ್ಯರನ್ನು ಮನುಷ್ಯತ್ವದಿಂದ  ಕಟ್ಟಲು ಪ್ರಯತ್ನ: ಅವರು ಮನಸ್ಸು ಮಾಡಿದ್ದರೆ, ದೊಡ್ಡ ಸಂಸ್ಥೆಗಳನ್ನು ಕಟ್ಟಬಹುದಿತ್ತು. ಅವರ ಚಿಂತನೆಗಳು ಬೇರೆ. ಕಟ್ಟಡಗಳನ್ನು ಕಟ್ಟಲು ಮಹತ್ವ ನೀಡಲಿಲ್ಲ. ಮನುಷ್ಯರನ್ನು ಮನುಷ್ಯತ್ವದಿಂದ  ಕಟ್ಟಲು ಪ್ರಯತ್ನ ಮಾಡಿದ್ದಾರೆ. ಆ ಮೂಲಕ ಸಾಮೂಹಿಕ ಚಿಂತನೆಯ ಸಮಾಜ ಕಟ್ಟಲು ಬಯಸಿದ್ದರು. ಹೊಗಳಿಕೆಗೆ ತೆಗಳಿಕೆಗೆ ಕಿವಿಗೊಡದೆ ಸ್ಥಿತಪ್ರಜ್ಞರಾಗಿದ್ದರು. ಆಧ್ಯಾತ್ಮಿಕವಾಗಿ ಬಹಳ ದೊಡ್ಡ ಸಾಧನೆ ಮಾಡಿದವರಿಗೆ ಮಾತ್ರ ಅದು ಸಾಧ್ಯವಾಗುತ್ತದೆ. ಇಂಥ ಪರಮಪೂಜ್ಯರನ್ನು ಹೊಂದಿದ ಮಠ ಪವಿತ್ರ ಕ್ಷೇತ್ರ. ಇದರ ಪರಂಪರೆ, ಸಂಸ್ಕೃತಿ, ಎಲ್ಲರನ್ನೂ ಒಳಗೊಂಡಿದೆ.   ಜಾತ್ರಾ ಮಾಹೋತ್ಸವದಲ್ಲಿ ಇದನ್ನು ಕಾಣುಬಹುದಾಗಿದೆ. ಅರ್ಥಪೂರ್ಣ ವಾಗಿ ಆಚರಣೆಯಾಗುವ ಹಂಬಲ ಗುರುಗಳದ್ದು. ಕೆರೆಕಟ್ಟೆಗಳ ನಿರ್ಮಾಣಕ್ಕಾಗಿ ಅವರು ತಾಯಿ ಹೃದಯದಿಂದ ಮಿಡಿಯುತ್ತಿದ್ದರು. ಅವರ ಆಶೀರ್ವಾದದಿಂದ  ಅನೇಕ ಕೆರೆ ತುಂಬಿಸುವ ಯೋಜನೆಗಳಾಗಿವೆ ಎಂದರು.

ಪರಿಸರ ಕಾಳಜಿ: ಸ್ವಾಮಿಗಳು ಜನ ಹಾಗೂ ಪರಿಸರದ ಬಗ್ಗೆಯೂ ಕಳಕಳಿ ಇದ್ದವರು. ಕಪ್ಪತಗುಡ್ಡವನ್ನು ವನ್ಯಜೀವಿ ತಾಣವನ್ನಾಗಿ ಘೋಷಿಸಲು ಅವರು ದೊಡ್ಡ ಹೋರಾಟ ಮಾಡಿದರು.  ಕನ್ನಡ ಬಾಷೆಯ ಬಗ್ಗೆಯೂ ಅವರಿಗೆ ಅಭಿಮಾನವಿತ್ತು ಗೋಕಾಕ್ ಚಲವಳಿಯಲ್ಲಿಯೂ ಭಾಗಿಯಾಗಿದ್ದರು.  ಅವರ ಭಾಷಣ ಕೇಳಿ ಡಾ: ರಾಜ್ ಕುಮಾರ್ ಅವರೂ ಪ್ರಶಂಸೆ ವ್ಯಕ್ತಪಡಿಸಿದ್ದರು. ಅವರನ್ನು ಕಳೆದುಕೊಂಡು ನಮ್ಮ ನಾಡು, ಸಂಸ್ಕೃತಿ , ಸಮಾಜ ಬಡವಾಗಿದೆ. , ನಿರ್ಣಾಯಕ ವಿಚಾರಗಳಿದ್ದದ್ದರಿಂದ ವಿವಾದಗಳಿದ್ದವು. ನಿಷ್ಠುರವಾಗಿ  ಸತ್ಯವನ್ನಾಡಿದರೆ ವಿವಾದಗಳಿರುತ್ತವೆ. ಸಕಾರಾತ್ಮಕ, ಜನಕಲ್ಯಾಣಕ್ಕಾಗಿ ವಿವಾದಗಳನ್ನು  ಹುಟ್ಟುತ್ತಿದ್ದವು. ಅವರ ಪ್ರಭಾವ ನಮ್ಮ ಮೇಲಿದೆ ಎಂದರು.

ಮೌಲಿಕ ಚಿಂತನೆಗಳು: ಪ್ರಸಿದ್ದಿ ಇದ್ದವರಿಗೆ ಎಲ್ಲರೂ ಪ್ರಶಸ್ತಿ ಕೊಡುತ್ತಾರೆ.  ಸದ್ದಿಲ್ಲದೆ ಸಮಾಜಕ್ಕಾಗಿ ಕೆಲಸ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ನೀಡಬೇಕೆಂದು ಸ್ವಾಮಿಗಳು ಹೇಳುತ್ತಿದ್ದರು.  ವಿಧವೆಯೊಬ್ಬರು ಬರೆದ ಪುಸ್ತಕಕ್ಕೆ 32 ವರ್ಷಗಳ ನಂತರ  ಪುಸ್ತಕ ಮತ್ತು ಲೇಖಕರಿಗೆ ಪ್ರಶಸ್ತಿ ನೀಡಲಾಯಿತು. ಮೌಲಿಕವಾಗಿ ಚಿಂತನೆ ಮಾಡಿ, ದೊಡ್ಡ ಪ್ರಮಾಣದಲ್ಲಿ ಪ್ರಕಟಣೆಗಳನ್ನು ಹೊರತಂದಿದ್ದಾರೆ.

ಸಾಧಕನಿಗೆ ಸಾವು ಅಂತ್ಯವಲ್ಲ ಸಾವಿನ ನಂತರವೂ ಬದುಕುವನು ಸಾಧಕ ಎನ್ನುವ ಸ್ವಾಮಿ ವಿವೇಕಾನಂದರ ನುಡಿಗಳಂತೆ  ಅವರು ಸಾಧಕರಾಗಿ ನಮ್ಮ ನಡುವೆ ಬದುಕಿದ್ದಾರೆ.  ಸಿದ್ದರಾಮ ಮಹಾಸ್ವಾಮಿಗಳನ್ನು ಗುರುತಿಸಿ ಪರಂಪರೆ ಮುಂದುವರೆಯಲು ಎಲ್ಲಾ ಕೆಲಸ ಮಾಡಿದ್ದಾರೆ ಎಂದರು.

Leave a Reply

Your email address will not be published. Required fields are marked *