ರಾಜಕೀಯ ವೈಷಮ್ಯ: ಬೆಟಗೇರಿಯಲ್ಲಿ ಚಾಕು ಇರಿತ-ಯುವಕ ಸಾವು
ಬೆಟಗೇರಿ ಮಂಜುನಾಥ ನಗರದಲ್ಲಿ ಬಿಗುವಿನ ವಾತಾವರಣ
ಪ್ರಜಾಪಥ ವಾರ್ತೆ
ಗದಗ: ರಾಜಕೀಯ ವೈಷಮ್ಯದಿಂದ ಪರಸ್ಪರ ವಾಗ್ವಾದ ವಿಕೋಪಕ್ಕೆ ತೆರಳಿ ಹಲ್ಲೆ ವೇಳೆ ಚಾಕು ಇರಿತಕ್ಕೊಳಗಾದ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಶನಿವಾರ ಬೆಟಗೇರಿಯ ಮಂಜುನಾಥ ನಗರದಲ್ಲಿ ನಡೆದಿದೆ.
ಗಜೇಂದ್ರಸಿಂಗ್ ಸಾವನ್ನಪ್ಪಿದ ದುರ್ದೈವಿ. ಆರೋಪಿ ಶಿವರಾಜ ಪೂಜಾರ ರೌಡಿ ಶೀಟರ್ ಎನ್ನಲಾಗಿದೆ.
ಆರೋಪಿ ಹಿಂಬಾಲಕನೋರ್ವ ಹುಡುಗಿಯೊಬ್ಬಳಿಗೆ ಮೊಬೈಲ್ ಮೂಲಕ ಎಸ್ಎಂಎಸ್ ಕಳುಹಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮೃತ ಗಜೇಂದ್ರಸಿಂಗ್ ಯುವಕನಿಗೆ ತಾಕೀತು ಮಾಡಿದ್ದನಂತೆ. ಇದರಿಂದ ಕೆರಳಿದ ಆರೋಪಿ ಶಿವರಾಜ ಪೂಜಾರನಿಗೆ ಗಜೇಂದ್ರಸಿಂಗ್ ಮೇಲೆ ರಾಜಕೀಯ ವೈಷಮ್ಯವಿತ್ತಂತೆ. ಇದನ್ನೇ ಬಳಸಿಕೊಂಡು ಮೃತನ ಮನೆಗೆ ಶುಕ್ರವಾರ ರಾತ್ರಿ ತೆರಳಿ ಹಲ್ಲೆ ಮಾಡಿದ್ದಾನೆ ಎಂಬುದು ಮೃತನ ಕುಟುಂಬಸ್ಥರ ಆರೋಪ.
ಶನಿವಾರ ಮಧ್ಯಾಹ್ನ ಮತ್ತೆ ರೌಡಿ ಶೀಟರ್ ಶಿವರಾಜನನ್ನು ಕರೆಸಿಕೊಂಡ ಎಸ್ಎಂಎಸ್ ಕಳುಹಿಸುತ್ತಿದ್ದ ಯುವಕ, ಗಜೇಂದ್ರಸಿಂಗ್ ನಿಗೆ ಚಾಕುವಿನಿಂದ ಇರಿದಿದ್ದಾರೆ. ಈ ವೇಳೆ ತೀವ್ರ ರಕ್ತಸ್ರಾವ ಆಗಿದ್ದರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಿತ್ತಾದರೂ ಚಿಕಿತ್ಸೆ ಫಲಿಸದೇ ಸಂಜೆ ಸಾವನ್ನಪ್ಪಿದ್ದಾನೆ.
ಇದರಿಂದ ಕೆರಳಿದ ಮೃತ ಗಜೇಂದ್ರಸಿಂಗ್ ನ ಸ್ನೇಹಿತರು ರೌಡಿಶೀಟರ್ ಶಿವರಾಜ ಪೂಜಾರ ಹಾಗೂ ಅವನ ಹಿಂಬಾಲ ಮತ್ತು ಎಸ್ಎಂಎಸ್ ಕಳುಹಿಸುತ್ತಿದ್ದ ಎನ್ನಲಾದ ಮಲ್ಲೇಶ ಕಣಕೆ ಎಂಬುವವರಿಗೆ ಚಾಕುವಿನಿಂದ ಇರಿದಿದ್ದಾರೆ. ಇದೀಗ ಇವರಿಬ್ಬರೂಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ಸುದ್ದಿ ತಿಳಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ಡಿ ಅವರು ಆಸ್ಪತ್ರೆ ಹಾಗೂ ಮಂಜುನಾಥ ನಗರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮತ್ತೊಂದೆಡೆ ಈ ಘಟನೆಯಿಂದ ಮಂಜುನಾಥ ನಗರ ಸೇರಿ ಸುತ್ತಲಿನ ಪ್ರದೇಶ ಬೂದಿಮುಚ್ಚಿದ ಕೆಂಡದಂತಿದೆ. ಸ್ಥಳದಲ್ಲಿ ಪೊಲೀಸರು ಬಿಡು ಬಿಟ್ಟಿದ್ದಾರೆ.