ಹುಯಿಲಗೋಳದಲ್ಲಿ ‘ಬಿರುಗಾಳಿ’ಗೆ ನಾಟಕ ಕಂಪನಿ ಸ್ಟೇಜ ಕುಸಿತ-ಲಕ್ಷಾಂತರ ರೂ. ಹಾನಿ
ಪ್ರದರ್ಶನವಾಗಬೇಕಿದ್ದ ನಾಟಕವೂ ರದ್ದು
ಪ್ರಜಾಪಥ ವಾರ್ತೆ
ಗದಗ: ಇಂದು (ರವಿವಾರ) ಸಂಜೆ ಸುರಿದ ಭಾರಿ ಬಿರುಗಾಳಿ ಸಹಿತ ಮಳೆಗೆ ತಾಲ್ಲೂಕಿನ ಹುಯಿಲಗೋಳದಲ್ಲಿ ನಾಟಕ ಪ್ರದರ್ಶನಕ್ಕೆ ಹಾಕಲಾಗಿದ್ದ ವೇದಿಕೆ ಕುಸಿದು ಬಿದ್ದಿದೆ.
ಅವಘಡದಲ್ಲಿ ಅದೃಷ್ಟವಶಾತ ಯಾರಿಗೂ ಏನೂ ಆಗಿಲ್ಲ. ಆದರೆ, ಗಾಳಿಯ ರಭಸಕ್ಕೆ ಸ್ಟೇಜನ್ ಮೇಲ್ಭಾಗವೇ ಮುರಿದು ಬಿದ್ದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಸೀನರಿಗಳು ಹಾಳಾಗಿವೆ.
ಮೊದಲೇ ಕಳೆದೆರಡು ವರ್ಷಗಳಿಂದ ರಂಗಚಟುವಟಿಕೆ ಕಸಿದುಕೊಂಡಿದ್ದ ಕೋವಿಡ್, ರಂಗಭೂಮಿ ಕಲಾವಿದರು, ಇದಕ್ಕೆ ಸಂಬಂಧಿಸಿದ ಬಣ್ಣಗಾರರು ಸೇರಿ ಹಲವರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿತ್ತು.
ಇದೀಗ ಕೋವಿಡ್ ಕಡಿಮೆಯಾಗುತ್ತಿದ್ದಂತೆ ರಂಗಚಟುವಟಿಕೆ ಶುರುವಾಗುತ್ತಿವೆ ಎನ್ನುವಾಗಲೇ ಮಳೆರಾಯನ ಕೋಪಕ್ಕೆ ಈ ಅವಘಡ ಸಂಭವಿಸಿದೆ. ಇದು ಶ್ರೀ ಮಾಲತೇಶ ಡ್ರಾಮಾ ಸೀನ್ಸ್, ರಂಗಪ್ಪ ಕಲ್ಲಪ್ಪ ದ್ಯಾವಣಸಿ ಎಂಬುವವರಿಗೆ ಸೇರಿದೆ. ಈ ಹಾನಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಥವಾ ಜಿಲ್ಲಾಡಳಿತ ಭರಿಸಲಿ ಎಂಬುದು ಗ್ರಾಮದ ಕಲಾಪೋಷಕರ ಒತ್ತಾಯವಾಗಿದೆ.
ಗ್ರಾಮದ ಶ್ರೀ ಮಾರುತಿ ದೇವರ ಜಾತ್ರೆ ನಿಮಿತ್ತ ಶ್ರೀ ದ್ಯಾಮವ್ವನ ಓಣಿಯ ಯುವಕರು ‘ಹಂತಕರ ಅಂತ್ಯ ಹಾಡಿದ ಹುಲಿ’ ಎಂಬ ನಾಟಕ ಪ್ರದರ್ಶನ ಮಾಡಬೇಕಿತ್ತು. ಆದರೆ, ಸ್ಟೇಜ್ ಕಳಚಿ ಬಿದ್ದ ಪರಿಣಾಮ ನಾಟಕ ಪ್ರದರ್ಶನ ರದ್ದುಗೊಂಡಿದೆ.