ಮೇಲ್ಮನೆಗೆ ಬಿ.ವೈ. ವಿಜಯೇಂದ್ರ ಸೇರಿ ಐವರು ಹೆಸರು ಶಿಫಾರಸು
ವಿಜಯೇಂದ್ರಗೆ ಒಲಿಯುತ್ತಾ ಮಂತ್ರಿಭಾಗ್ಯ?
ಪ್ರಜಾಪಥ ವಾರ್ತೆ
ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ಜೂನ್ 3ರಂದು ನಡೆಯುವ ಚುನಾವಣೆಗೆ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಈ ಪ್ರಸ್ತಾವಕ್ಕೆ ಬಿಜೆಪಿ ರಾಜ್ಯ ಪ್ರಮುಖರ ಸಮಿತಿ (ಕೋರ್ ಕಮಿಟಿ) ಶನಿವಾರ ಒಪ್ಪಿಗೆ ನೀಡಿದೆ.
ಬಿಜೆಪಿ ರಾಜ್ಯ ಘಟಕದ ಕಚೇರಿ ಜಗನ್ನಾಥ ಭವನದಲ್ಲಿ ಶನಿವಾರ ಮಧ್ಯಾಹ್ನ ಪ್ರಮುಖರ ಸಮಿತಿ ಸಭೆ ನಡೆಯಿತು. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಶಾಸಕರಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಚಿವರಾದ ಆರ್. ಅಶೋಕ, ಗೋವಿಂದ ಕಾರಜೋಳ, ಡಾ.ಸಿ.ಎನ್. ಅಶ್ವತ್ಥ ನಾರಾಯಣ, ಬಿ. ಶ್ರೀರಾಮುಲು, ಶಾಸಕ ಕೆ.ಎಸ್. ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ, ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಮತ್ತು ಸಂಘಟನಾ ಕಾರ್ಯದರ್ಶಿ ಅರುಣಾ ಸಭೆಯಲ್ಲಿ ಪಾಲ್ಗೊಂಡಿದ್ದರು.
ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ನಾಲ್ಕು ಸ್ಥಾನಗಳು ದೊರಕಲಿದ್ದು, ಉಳಿದ ಮೂರು ಸ್ಥಾನಗಳಿಗೆ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ’ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮೊದಲ ಸ್ಥಾನಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಎರಡನೇ ಸ್ಥಾನಕ್ಕೆ ಹಾಲಿ ಸದಸ್ಯ ಕೆ.ಸಿ. ರಾಮಮೂರ್ತಿ ಅವರ ಪುನರಾಯ್ಕೆ ಸಾಧ್ಯತೆ ಹೆಚ್ಚಾಗಿದೆ. ಈ ಇಬ್ಬರೂ ಸೇರಿದಂತೆ ಕೆಲವರ ಹೆಸರುಗಳಿರುವ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಮುಖರ ಸಮಿತಿ ಅಂತಿಮಗೊಳಿಸಿದೆ ಎಂದು ಗೊತ್ತಾಗಿದೆ.