ಮುದ್ರಣಕಾಶಿಯಲ್ಲಿ ‘ಬೊಂಬಾಟ ಬಣ್ಣದೋಕುಳಿ’!
ಕಾಮ-ರತಿಯರ ಮೆವಣಿಗೆ: ರಂಗೀನ ಲೋಕದಲ್ಲಿ ಮಿಂದೆದ್ದ ಜನ
ಪ್ರಜಾಪಥ ವಾರ್ತೆ
ಗದಗ: ಹೋಳಿ ಹುಣ್ಣಿಮೆ ಬಳಿಕ ಐದನೇ ದಿನವಾದ ಮಂಗಳವಾರ ಗದಗ-ಬೆಟಗೇರಿ, ಲಕ್ಷ್ಮೇಶ್ವರ ಸೇರಿ ಹಲವೆಡೆ ರಂಗಪಂಚಮಿ ಅದ್ದೂರಿಯಾಗಿ ನಡೆಯಿತು. ಅವಳಿ ನಗರದಲ್ಲಿ ಬೀದಿ ಬೀದಿಗಳಲ್ಲಿ ಕಾಮಣ್ಣನ ದಹನ… ಎಲ್ಲೆಲ್ಲೂ ಹಲಗೆ-ತಮಟೆಗಳ ವಾದನ… ಪರಸ್ಪರ ಬಣ್ಣ ಹಚ್ಚಿಕೊಳ್ಳುತ್ತಿರುವ ಯುವಕ-ಯುವತಿಯರು ಹಾಗೂ ಮಕ್ಕಳ ದೃಶ್ಯಗಳು ಸಾಮಾನ್ಯವಾಗಿದ್ದವು. ಅವಳಿ-ನಗರದ ಜನತೆ ರಂಗು ರಂಗೀನ್ ಲೋಕದಲ್ಲಿ ಮಿಂದೆದ್ದರು.
ಎಲ್ಲಿ ನೋಡಿದರಲ್ಲಿ ಬಣ್ಣವೋ ಬಣ್ಣ ಕಾಣಿಸುತ್ತಿತ್ತು. ರಂಗುರಂಗಿನ ಬಣ್ಣದ ಓಕುಳಿಯಲ್ಲಿ ಮಕ್ಕಳು, ಮಹಿಳೆಯರು, ಯುವಕರು, ಹಿರಿಯರು ಸೇರಿಕೊಂಡು ಬಣ್ಣದಾಟ ಆಡುತ್ತ ಸಾಂಪ್ರದಾಯಿಕ ಹೋಳಿ ಹಬ್ಬದ ಸಂಭ್ರಮಾಚರಣೆಗೆ ಸಾಕ್ಷಿಯಾದರು. ಕರೊನಾ ವೈರಸ್ ಕಡಿಮೆ ಆಗಿದ್ದರಿಂದ ಓಕುಳಿ ಹಬ್ಬ ಯುವಕರಿಎ ಮತ್ತಷ್ಟು ಜೋಶ್ ನೀಡಿತ್ತು.
ಗದಗ-ಬೆಟಗೇರಿ ಅವಳಿ ನಗರದ ಬಡಾವಣೆ, ಓಣಿ ಹಾಗೂ ಪ್ರಮುಖ ವೃತ್ತಗಳಲ್ಲಿ ಸೂರ್ಯ ಉದಯಿಸುವ ಮುನ್ನ ಕಾಮದಹನ ಮಾಡಿದ ನಂತರ ಬಣ್ಣ ಎರಚಾಡುವ ರಂಗಿನಾಟಕ್ಕೆ ಚಾಲನೆ ಸಿಕ್ಕಿತು. ಯುವಕರು ಗುಂಪು ಗುಂಪಾಗಿ ಗೆಳೆಯರಿಗೆ, ಸಂಬಂ„ಕರಿಗೆ ಬಣ್ಣ ಹಚ್ಚಿಕೊಂಡು ಕೇಕೆ ಹಾಕುತ್ತ ಜೋರಾಗಿ ಬೈಕ್ ಓಡಿಸಿಕೊಂಡು ಮೋಜು ಮಸ್ತಿಯಲ್ಲಿ ತೊಡಗಿದ್ದರು. ಯುವತಿಯರು ತಾವೇನು ಕಡಿಮೆ ಇಲ್ಲ ಎಂಬರ್ಥದಲ್ಲಿ ಪರಸ್ಪರ ಬಣ್ಣ ಹಚ್ಚುವ ಮೂಲಕ ರಂಗಪಂಚಮಿಗೆ ನಿಜವಾದ ಅರ್ಥದಲ್ಲಿ ರಂಗು ತುಂಬಿದರು.
ನಗರದ ಒಕ್ಕಲಗೇರಿ, ಗಂಗಾಪೂರಪೇಟೆ, ರಾಜೀವಗಾಂಧಿ ನಗರ, ವಿವೇಕಾನಂದ ನಗರ, ಮಸಾರಿ, ಹುಡ್ಕೊ ಕಾಲನಿ, ಕಿಲ್ಲಾ, ದಾಸರಗಲ್ಲಿ, ಶಹಪೂರಪೇಟೆ, ಕಳಸಾಪುರ ರಸ್ತೆ, ಖಾನತೋಟ, ಒಕ್ಕಲಗೇರಿ ಸೇರಿ ವಿವಿಧ ಬಡಾವಣೆಯಲ್ಲಿ ಯುವತಿಯರು ಹಾಗೂ ಮಹಿಳೆಯರು ಪರಸ್ಪರ ಬಣ್ಣ ಎರಚಿ ಕುಣಿದು ಸಂಭ್ರಮಿಸಿದರು.
ಹಲಗೆ ನಾದಕ್ಕೆ ಹೆಜ್ಜೆ ಹಾಕಿದ ಯುವಕರು : ಕೆಲವೆಡೆ ಹೋಳಿ ಹಬ್ಬದ ಸಂಕೇತವಾದ ಹಲಗೆ ಬಾರಿಸುತ್ತ, ಸಂತೋಷದ ದ್ಯೋತಕವಾಗಿ ಕೇಕೇ ಹಾಕುತ್ತ ಯುವಕರು ಚಲನಚಿತ್ರ ಗೀತೆಗಳಿಗೆ ಹೆಜ್ಜೆ ಹಾಕಿ ಖುಷಿ ಪಟ್ಟರು. ಯುವಕ-ಯುವತಿಯರು ಮಧ್ಯಾಹ್ನದವರೆಗೂ ಪರಸ್ಪರ ಬಣ್ಣ ಎರಚಾಡಿಕೊಳ್ಳುತ್ತಿದ್ದ ದೃಶ್ಯ ಅವಳಿ ನಗರದಲ್ಲಿ ಕಂಡು ಬಂದಿತು. ಜಗ್ಗಲಿಗೆ ನಿನಾದದೊಂದಿಗೆ ರತಿ ಕಾಮ ಮೂರ್ತಿಗಳ ಮೆರವಣಿಗೆ ವಿಶೇಷ ಕಳೆಕಟ್ಟಿತ್ತು. ಅವಳಿ ನಗರದಲ್ಲಿ ರಂಗ ಪಂಚಮಿ ಇರುವುದರಿಂದ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಮಾರುಕಟ್ಟೆಗಳು ಬಿಕೋ ಎನ್ನುತ್ತಿದ್ದವು.
ಬಣ್ಣದ ಓಕುಳಿ ನಿಮಿತ್ತ ಅವಳಿ ನಗರದಲ್ಲಿ ವಾಹನಗಳ ಸಂಚಾರ ಬಾಗಶಃ ಬಂದ್ ಆಗಿತ್ತು. ಜತೆಗೆ ಬಹುತೇಕ ಹೋಟೆಲ್, ಖಾನಾವಳಿ, ತಂಪು ಪಾನೀಯ ಅಂಗಡಿ, ಕಬ್ಬಿನ ಹಾಲು, ಹಣ್ಣು-ಹಂಪಲು, ಎಳನೀರು ಮಾರುವ ಅಂಗಡಿಗಳೆಲ್ಲ ಬಾಗಿಲು ಮುಚ್ಚಿದ್ದರಿಂದ ಪರಸ್ಥಳದಿಂದ ನಗರಕ್ಕೆ ಆಗಮಿಸಿದ್ದ ಪ್ರಯಾಣಿಕರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸಿದರು.
ಚಿನ್ನಾಭರಣಗಳಿಂದ ಕಂಗೊಳಿಸುತ್ತಿತ್ತು ಸರ್ಕಾರಿ ಕಾಮ-ರತಿಯರು!
ಗದಗ ನಗರದ ಕಿಲ್ಲಾ ಚಂದ್ರಸಾಲಿಯಲ್ಲಿ ಕಳೆದ ಐದು ದಿನಗಳಿಂದ ಪ್ರತಿಷ್ಠಾಪಿಸಿದ್ದ ಸರ್ಕಾರಿ ಕಾಮಣ್ಣ-ರತಿ ಮೂರ್ತಿಯನ್ನು ಬಂಗಾರದ ಆಭರಣಗಳಿಂದ ಸಿಂಗರಿಸಲಾಗಿತ್ತು. ಭಕ್ತರು ಕಾಯಿ, ಕರ್ಪೂರ, ಹಣ್ಣು-ಹಂಪಲ, ಹೋಳಿಗೆ ನೈವೇದ್ಯ ಹಿಡಿದರು. ಮದುವೆಯಾಗದ ಯುವಕರು ರತಿಗೆ, ಯುವತಿಯರು ಮನ್ಮಥನ ಕೈಗೆ ಕಂಕಣ ಕಟ್ಟಿದರೆ, ಮಕ್ಕಳಾಗದವರು ಕಾಮಣ್ಣ ಕೈಗೆ ಬೆಳ್ಳಿಯ ತೊಟ್ಟಿಲು ಕಟ್ಟಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.