ಮನೆಗೆ ಬಂದ ‘ಸೊಸೆ’ಯನ್ನು ಒಳ ಕರೆಯದೇ ಗೇಟಲ್ಲೇ ನಿಲ್ಲಿಸಿದ ಬೆಟಗೇರಿಯ ಕಾಂಗ್ರೆಸ್ ನಾಯಕನ ಕ್ರೂರ ನಡೆ

Spread the love

ಗೇಟ್ ಲ್ಲೇ ಧರಣಿಗೆ ಮುಂದಾದ ಮಹಿಳೆ-ಪೊಲೀಸರ ಮಧ್ಯಪ್ರವೇಶ

ರಾತ್ರಿಯಾಗಿದ್ದರೂ ಕರುಣೆ ತೋರದ ನಗರಸಭೆ ಮಾಜಿ ಉಪಾಧ್ಯಕ್ಷ

 

ಪ್ರಜಾಪಥ ವಾರ್ತೆ

ಗದಗ: ತವರು ಮನೆಯಿಂದ ಗಂಡನ ಮನೆಗೆ ಬಂದಿದ್ದ ಸೊಸೆಯನ್ನು ಒಳಗೆ ಸೇರಿಸಿಕೊಳ್ಳದೇ ಇರುವುದನ್ನು ಖಂಡಿಸಿ

ಗಂಡನ ಮನೆ ಎದುರು ‘ಮಗ ಮತ್ತು ಗಂಡನಿಗಾಗಿ ಪ್ರತಿಭಟನೆ ನಡೆಸಿರುವ ಘಟನೆ ಸೋಮವಾರ ಸಂಜೆ ಬೆಟಗೇರಿಯಲ್ಲಿ ನಡೆದಿದೆ. ಅಭಿಲಾಷಾ ಕಿರಣ ಬಣ್ಣದ ಎಂಬ ಮಹಹಿಳೆಯೇ ಧರಣಿ ನಡೆಸಿದವರು.

ಘಟನೆ ವಿವರ: ಕೌಟುಂಬಿಕ ಕಲಹದಿಂದಾಗಿ ಕಳೆದ ಒಂದೂವರೆ ವರ್ಷದಿಂದ ಗಂಡನ ಮನೆಯಿಂದ ದೂರ ಉಳಿದಿದ್ದ ಅಭಿಲಾಷಾ, ಮೂಲತಃ ಇಳಕಲ್ಲದವರು.

ಬೆಟಗೇರಿಯ ಕಾಂಗ್ರೆಸ್ ಮುಖಂಡ ಹಾಗೂ ನಗರಸಭೆ ಮಾಜಿ ಉಪಾಧ್ಯಕ್ಷ ಅಶೋಕ ಬಣ್ಣದ ಅವರ ಪುತ್ರ ಕಿರಣ ಅವರೊಂದಿಗೆ ಮದುವೆಯಾಗಿದ್ದಾರೆ. ಇವರಿಗೆ ಓರ್ವ ಪುತ್ರನೂ ಇದ್ದಾನೆ. ತವರು ಮನೆಯವರೂ ಮಹಿಳೆಯನ್ನು ನಿರ್ಲಕ್ಷಿಸಿದ್ದರಿಂದ ದಾರಿ ಕಾಣದ ಮಹಿಳೆ, ಇಳಕಲ್ ನಿಂದ ಬೆಟಗೇರಿಯಲ್ಲಿರುವ ಗಂಡನ ಮನೆಗೆ ಬಂದಿದ್ದಾಳೆ.

ಈ ವೇಳೆ ಗಂಡನ ಮನೆಯವರು ಒಳಗೆ ಕರೆದುಕೊಳ್ಳದಿದ್ದಾಗ ಗಂಡನ ಮನೆಯ ಪ್ರವೇಶ ದ್ವಾರದಲ್ಲೇ ‘ಮೌನ’ ಧರಣಿಗೆ ಕುಳಿತಿದ್ದಾಳೆ.

ಈ ಬಗ್ಗೆ ಗಂಡ ಕಿರಣ ಹಾಗೂ ಮಾವ ಅಶೋಕ ಬಣ್ಣದ ಅವರು ಬೆಟಗೇರಿ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾರೆ. ಮಹಿಳಾ ಪೇದೆಯೊಂದಿಗೆ ಸ್ಥಳಕ್ಕೆ ಬಂದ ಬೆಟಗೇರಿ ಪೊಲೀಸರು, ಗಂಡನ ಮನೆಯವರಿಗೆ ಎಷ್ಟೇ ಹೇಳಿದರೂ ಅಭಿಲಾಷ ಅವರನ್ನು ಒಳಗೆ ಕರೆದುಕೊಂಡು ಹೋಗಲಿಲ್ಲ.

ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಹಾಗೂ ಮಾಧ್ಯಮದವರ ಮೇಲೆಯೇ ಹರಿಹಾಯ್ದ ಅಶೋಕ ಬಣ್ಣದ ಅವರು, ನಾವು ಈ ಬಗ್ಗೆ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಪತ್ರಿಕೆಯಲ್ಲಿ ಬಂದರೇ ಏನಾಗಬೇಕು ಎಂದು ಕಿಡಿಕಾರಿದರು.

ಇದೇ ಸಂದರ್ಭದಲ್ಲಿ ಧರಣಿ ನಿರತ ಮಹಿಳೆ, ಅಶೋಕ ಬಣ್ಣದ ಅವರ ಸೊಸೆ ಅಭಿಲಾಷಾ ಅವರು, ‘ನನ್ನದು ತಪ್ಪಾಗಿದೆ ರೀ.. ನನ್ನನ್ನು ಒಳಗೆ ಕರೆದುಕೊಳ್ಳಿ ಎಂದು ಗಂಡ ಕಿರಣ ಮತ್ತು ಮಾವ ಅಶೋಕ ಬಣ್ಣದ ಅವರನ್ನು ಪರಿಪರಿಯಾಗಿ ಬೇಡಿಕೊಂಡರೂ ಸಹ ಇದಕ್ಕೆ ಸ್ಪಂದಿಸದ ಗಂಡನ ಮನೆಯವರು, ಮುಖ್ಯ ಗೇಟ್ ಅನ್ನು ಬಂದ್ ಮಾಡಿಕೊಂಡು ಒಳಗೆ ಹೋದರು.

ಈ ವೇಳೆ ಮಹಿಳೆ ಮಾತ್ರ ಗೇಟ್ ಮುಂದೆಯೇ ಧರಣಿ ಮುಂದುವರಿಸುವುದಾಗಿ ಪಟ್ಟುಹಿಡಿದಳು. ಬಳಿಕ ಪೊಲೀಸರು ಮಹಿಳೆಯ ಮನವೊಲಿಸಿ, ಸ್ವಾಧಾರ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಸದ್ಯಕ್ಕೆ ಮಹಿಳೆ ಮಾತ್ರ ನನಗೆ ನನ್ನ ಗಂಡ ಬೇಕು, ಮಗು ಬೇಕು ಎಂದು ಹೇಳುತ್ತಿದ್ದಾಳೆ. ಮಂಗಳವಾರ ಮುಂದಿನ ನಡೆ ಕುತೂಹಲ ಮೂಡಿಸಿದೆ.

Leave a Reply

Your email address will not be published. Required fields are marked *