ಪರಿಷತ್ ಫೈಟ್: ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿಯಿಂದ ಹೊರಟ್ಟಿ ಹೆಸರು ಘೋಷಣೆ

Spread the love

ವಿಧಾನಸಭೆಯಿಂದ ಪರಿಷತ್ ಗೆ ಲಕ್ಷ್ಮಣ ಸವದಿ ಸೇರಿ ನಾಲ್ವರ ಹೆಸರು ಅಂತಿಮ

 

ಪ್ರಜಾಪಥ ವಾರ್ತೆ

ಬೆಂಗಳೂರು/ನವದೆಹಲಿ: ವಿಧಾನ ಸಭೆಯಿಂದ ವಿಧಾನ ಪರಿಷತ್ ಗೆ ನಡೆಯುವ ಮತ್ತು ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರಕ್ಕೆ ಬಿಜೆಪಿ ಅಂತಿಮವಾಗಿ ಅಭ್ಯರ್ಥಿಗಳನ್ನು ಅಖೈರುಗೊಳಿಸಿದೆ. ಆರಂಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಹೆಸರು ಇರಲಿಲ್ಲ. ಆದರೆ, ಪರಿಷ್ಕರಣೆಗೊಂಡ ಪಟ್ಟಿಯಲ್ಲಿ ಲಕ್ಷ್ಮಣ ಸವದಿ ಅವರು ಲಿಂಗಾಯತ ಕೋಟಾದಡಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಏಳು ಸ್ಥಾನಗಳ ಪೈಕಿ ಬಿಜೆಪಿ ಗೆಲ್ಲಲು ಇರುವ ನಾಲ್ಕು ಸ್ಥಾನಗಳಿಗೆ ಪರಿಶಿಷ್ಟ ಕೋಟಾದಿಂದ ಚಲುವಾದಿ ನಾರಾಯಣಸ್ವಾಮಿ, ನಾಯಕ ಕೋಟಾದಡಿ ಹೇಮಲತಾ ನಾಯಕ, ಹಿಂದುಳಿದ ವರ್ಗದಿಂದ ಎಸ್. ಕೇಶವಪ್ರಸಾದ ಅವರ ಹೆಸರನ್ನು ಅಂತಿಮಗೊಳಿಸಿದೆ.

ಇನ್ನು ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಈಚೆಗಷ್ಟೇ ಬಿಜೆಪಿ ಸೇರಿದ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರ ಹೆಸರನ್ನು ಅಂತಿಮಗೊಳಿಸಿ ರಾಜ್ಯ ಬಿಜೆಪಿ ಉಸ್ತುವಾರಿಯೂ ಆಗಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ ಸಿಂಗ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ರೇಸ್ ನಲ್ಲಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಪುತ್ರರೂ ಆಗಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಈ ಬಾರಿಯೂ ಹೈಕಮಾಂಡ್ ಗ್ರೀನ್ ಸಿಗ್ನಲ್ ತೋರಿಸಲಿಲ್ಲ. ಜೊತೆಗೆ ಮೊದಲ ಸಂಭಾವ್ಯರ ಪಟ್ಟಿಯಲ್ಲಿ ಲಿಂಗಾಯತರ ಕೋಟಾದಲ್ಲಿ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ ಅವರ ಹೆಸರಿತ್ತು. ಕೊನೆಘಳಿಗೆಯಲ್ಲಿ ಅವರಿಗೆ ಕೈತಪ್ಪಿದೆ.

Leave a Reply

Your email address will not be published. Required fields are marked *