Prajapath

ಮುಖ್ಯಾಂಶಗಳು

ಶಾಲೆಯ ಶಿಸ್ತು ಕಾಪಾಡುವುದರ ಜತೆಗೆ ವೀರತೆ, ದೃಢತೆ ಮತ್ತು ಪ್ರಾಮಾಣಿಕತೆ ಅಳವಡಿಸಿಕೊಳ್ಳಿ

Spread the love
  • ಸೈನಿಕ ಶಾಲೆ ಕೊಡಗಿಗೆ ಸೈನಿಕ ಶಾಲಾ ಸೊಸೈಟಿಯ ತಪಾಸಣಾ ಅಧಿಕಾರಿ ಕಮಾಂಡರ್ ರಾಜೇಶ್ ಕೆ ಶರ್ಮಾ ಭೇಟಿ

 

ಪ್ರಜಾಪಥ ವಾರ್ತೆ
ಕುಶಾಲನಗರ: ಇಲ್ಲಿಗೆ ಸಮೀಪದ ಕೂಡಿಗೆ ಯ ಸೈನಿಕ ಶಾಲಾ ಸೊಸೈಟಿಯ ವತಿಯಿಂದ ವಾರ್ಷಿಕ ತಪಾಸಣೆಯನ್ನು ಕಮಾಂಡರ್ ರಾಜೇಶ್ ಕೆ ಶರ್ಮಾ ಅವರು ಸೈನಿಕ್ ಸ್ಕೂಲ್ಸ್ ಸೊಸೈಟಿ, ನವದೆಹಲಿಯಿಂದ ಆಗಮಿಸಿ ತಪಾಸಣೆ ನಡೆಸಿದರು.

ರಕ್ಷಣಾ ಸಚಿವಾಲಯದ ವ್ಯವಹಾರಗಳ ಚುಕ್ಕಾಣಿ ಹಿಡಿದಿರುವ ಅಧಿಕಾರಿಯು ಎಲ್ಲಾ 33 ಸೈನಿಕ ಶಾಲೆಗಳನ್ನು ಹಾಗೂ ನೂತನವಾಗಿ ಆರಂಭವಾದ ಪಿ ಪಿ ಪಿ ಮೋಡ್ ನ ಸೈನಿಕ ಶಾಲೆಗಳ ತಪಾಸಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಶಾಲೆಗೆ ಆಗಮಿಸಿದ ತಪಾಸಣಾಧಿಕಾರಿ ಕಮಾಂಡರ್ ರಾಜೇಶ್ ಕೆ ಶರ್ಮಾರವರು ಶಾಲೆಯಲ್ಲಿನ ‘ಯುದ್ಧ ವೀರರ ಸ್ಮಾರಕಕ್ಕೆ’ ಪುಷ್ಟಾರ್ಚನೆ ಸಲ್ಲಿಸುವುದರ ಮೂಲಕ ಯುದ್ಧ ವೀರರಿಗೆ ಗೌರವ ವಂದನೆ ಸಲ್ಲಿಸಿದರು.

ನಂತರ ಶಾಲೆಯ ಅಶ್ವದಳದ ನೇತೃತ್ವದಲ್ಲಿ ಆಗಮಿಸಿದ ಅಧಿಕಾರಿಯವರಿಗೆ ಗೌರವ ವಂದನೆಯೊಂದಿಗೆ ಸ್ವಾಗತಿಸಿ, ಶಾಲೆಯ ಕುವೆಂಪು ವಿವಿದೊದ್ಧೇಶ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಭೆಗೆ ಕರೆತರಲಾಯಿತು. ಈ ಸಭೆಯಲ್ಲಿ ಮುಖ್ಯವಾಗಿ 2024-25 ನೇ ಸಾಲಿನ ಸೈನಿಕ ಶಾಲೆ ಕೊಡಗಿನಲ್ಲಿ ನೂತನವಾಗಿ ರಚನೆಯಾದ ವಿದ್ಯಾರ್ಥಿಗಳ ಪದಗ್ರಹಣ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳು ವಿದ್ಯಾರ್ಥಿಗಳ ಭುಜದ ಮೇಲಿನ ಬ್ಯಾಡ್ಜ್ ಗಳನ್ನು ಅನಾವರಣಗೊಳಿಸುವುದರ ಮೂಲಕ ಜವಾಬ್ದಾರಿಗಳನ್ನು ವಿತರಿಸಿದರು.

ಹಾಗೆಯೇ ಪದಗ್ರಹಣಗೊಂಡ ವಿದ್ಯಾರ್ಥಿ ನಾಯಕರು ಶಾಲೆಯ ಧ್ಯೇಯ ವಾಕ್ಯವಾದ ವೀರತೆ, ದೃಢತೆ ಮತ್ತು ಪ್ರಾಮಾಣಿಕತೆಯನ್ನು ಉನ್ನತ ಹಂತದಲ್ಲಿ ಗೌರವಯುತವಾಗಿ ಎತ್ತಿಹಿಡಿಯಲು ಮತ್ತು ತಮ್ಮ ಸಾಮರ್ಥ್ಯ, ವಿಶ್ವಾಸದೊಂದಿಗೆ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವುದಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕೆಡೆಟ್ ಆದಿತ್ಯ ಕುಮಾರ್ ಶಾಲೆಯ ವಿದ್ಯಾರ್ಥಿ ನಾಯಕನಾಗಿ ಅಧಿಕಾರ ವಹಿಸಿಕೊಂಡರು.

ಪದಗ್ರಹಣಗೊಂಡ ವಿದ್ಯಾರ್ಥಿಗಳು ಶಾಲೆಯ ಶಿಸ್ತನ್ನು ಕಾಪಾಡುವುದರೊಂದಿಗೆ. ಕಿರಿಯ ವಿದ್ಯಾರ್ಥಿಗಳಿಗೆ ಮಾದರಿಯಾಗುವ ಮೂಲಕ ಶಾಲಾ ಚಟುವಟಿಕೆಗಳನ್ನು ಸುಗಮವಾಗಿ ಜರುಗಲು ಶಿಕ್ಷಕರಿಗೆ ಸಹಾಯ ಮಾಡುತ್ತಾರೆ.
ಈ ಸಮಾರಂಭದಲ್ಲಿ ವಿದ್ಯಾರ್ಥಿನಿ ಕೆಡೆಟ್ ದೀಪ್ತಿ ಮತ್ತು ತಂಡದವರು ಸ್ವಾಗತ ನೃತ್ಯ ನೃತ್ಯವನ್ನು ಪ್ರದರ್ಶಿಸಿದರು. ಹಾಗೆಯೇ ಕೆಡೆಟ್ ರಾಮನ್ ಮತ್ತು ತಂಡದಿಂದ ಸ್ವಾಗತ ಗೀತೆಯ ಗಾಯನ ಮಾಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಶಾಲಾ ತಪಾಸಣಾಧಿಕಾರಿ ಮುಕ್ತ ಮನಸ್ಸು, ಮಹತ್ವಾಕಾಂಕ್ಷೆ, ನಮ್ರತೆ ಮತ್ತು ಸಾಮಿಪ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುವುದರೊಂದಿಗೆ, ನೂತನವಾಗಿ ಪದಗ್ರಹಣಗೊಂಡ ವಿದ್ಯಾರ್ಥಿಗಳಿಗೆ ಜವಾಬ್ದಾರಿಯ ಪ್ರಾಮುಖ್ಯತೆಯನ್ನು ತಿಳಿಸಿದರು. ಹಾಗೆಯೇ ತಮ್ಮ ಸಹಪಾಠಿಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸಲು ತಿಳಿಸಿದರು. ಇದರೊಂದಿಗೆ ಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಮತ್ತು ದೇಶದ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸಲು ಸ್ಥಳೀಯ ಕಲಾ ಪ್ರಕಾರಗಳನ್ನು ಅನ್ವೇಷಿಸಲು ಮತ್ತು ಅಳವಡಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು..
ತಪಾಸಣಾಧಿಕಾರಿಗಳು ತಮ್ಮ ಭೇಟಿಯ ಸಂದರ್ಭದಲ್ಲಿ ಸರ್ಕಾರದ ಅನುದಾನದ ಫಲಪ್ರದ ಬಳಕೆ ಮತ್ತು ಶಾಲೆಯಲ್ಲಿನ ಎಲ್ಲಾ ಮೂಲಭೂತ ಸೌಕರ್ಯಗಳು ಮತ್ತು ಪ್ರಗತಿಯಲ್ಲಿರಯವ ಕಾಮಗಾರಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕ್ರೀಡಾ ಚಟುವಟಿಕೆಗಳು ಮತ್ತು ಸೌಲಭ್ಯಗಳು, ಕುದುರೆ ಸವಾರಿ ಅಖಾಡ ಮತ್ತು ಸ್ಕೇಟಿಂಗ್ ರಿಂಕ್ ಸೇರಿದಂತೆ ವಿವಿಧ ಶೈಕ್ಷಣಿಕ ಮತ್ತು ತರಬೇತಿ ಚಟುವಟಿಕೆಗಳನ್ನು ಅವರು ಪರಿಶೀಲಿಸಿದರು. ಎನ್‌ ಡಿ ಎಗೆ ಸೇರ್ಪಡೆಗೊಂಡ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಯು ಪಿ ಎಸ್‌ ಸಿ – ಎನ್‌ ಡಿ ಎ ಪರೀಕ್ಷೆಯ ತಯಾರಿಯಲ್ಲಿ ಶಾಲೆಯ ಕೊಡುಗೆಯನ್ನು ಪರಿಶೀಲಿಸಿದರು. ಹತ್ತನೇ ಮತ್ತು ಹನ್ನೆರಡನೇ ತರಗತಿಯ ಸಿ ಬಿ ಎಸ್ ಸಿ ಬೋರ್ಡ್ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ತಪಾಸಣಾ ಅಧಿಕಾರಿ ಶ್ಲಾಘಿಸಿದರು.
ನಂತರ ತಪಾಸಣಾಧಿಕಾರಿಗಳು ಶೈಕ್ಷಣಿಕ ಮತ್ತು ಆಡಳಿತ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಶಾಲೆಯ ವಿದ್ಯಾರ್ಥಿಗಳ ಎನ್‌ ಡಿ ಎ ಗೆ ಸೇರ್ಪಡೆಯ ಸಂಖ್ಯೆಯನ್ನು ಹೆಚ್ಚಿಸಲು ಶಾಲೆಯು ಕೈಗೊಂಡ ಯೋಜನೆಯನ್ನು ಶ್ಲಾಘಿಸುವುದರೊಂದಿಗೆ, ತಮ್ಮ ಸಲಹೆಗಳನ್ನೂ ಸಹ ನೀಡಿದರು. ಹಾಗೆಯೇ ತಪಾಸಣಾಧಿಕಾರಿಗಳ ಭೇಟಿಯ ದ್ಯೋತಕವಾಗಿ ಶಾಲಾ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿಗಳ ಮಧ್ಯೆ ಸ್ನೇಹಮಯ ವಾಲಿಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳ ತಂಡ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.
ಈ ಸಂದರ್ಭದಲ್ಲಿ ಶಾಲೆಯ ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ ಪ್ರಕಾಶ್ ರಾವ್, ಉಪ ಪ್ರಾಂಶುಪಾಲರಾದ ಸ್ಕ್ವಾಡ್ರನ್ ಲೀಡರ್ ಮನ್‌ಪ್ರೀತ್ ಸಿಂಗ್, ಹಿರಿಯ ಶಿಕ್ಷಕರಾದ ವಿಬಿನ್ ಕುಮಾರ್, ಬೋಧಕ – ಬೋಧಕೇತರ ಸಿಬ್ಬಂದಿ, ಎನ್‌ಸಿಸಿ ಮತ್ತು ದೈಹಿಕ ಶಿಕ್ಷಕವರ್ಗದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!