ಕೊಡಗನ್ನು ಬೆಚ್ಚಿ ಬೀಳಿಸಿದ ಸೂರ್ಲಬ್ಬಿ 10ನೇ ತರಗತಿ ವಿದ್ಯಾರ್ಥಿ ಮೀನಾ ಹತ್ಯೆ ಪ್ರಕರಣ
ಪ್ರಜಾಪಥ ವಾರ್ತೆ
ಕುಶಾಲನಗರ (ಕೊಡಗು): ಹತ್ತನೆ ತರಗತಿಯ ವಾರ್ಷಿಕ ಪರೀಕ್ಷೆ ಫಲಿತಾಂಶದ ಖುಷಿಯಲ್ಲಿದ್ದ ಬಾಲಕಿಯನ್ನು ಬರ್ಬರವಾಗಿ ಹತ್ಯೆ ಮಾಡಿ, ಆರೋಪಿ ರುಂಡದ ಜೊತೆ ಪರಾರಿ ಆದ ಘಟನೆ ಕೊಡಗನ್ನು ಬೆಚ್ಚಿ ಬೀಳಿಸಿದೆ.
ಸೂರ್ಲಬ್ಬಿ ಸರ್ಕಾರಿ ಶಾಲಾ ವಿದ್ಯಾರ್ಥಿನಿ, 16 ವರ್ಷದ ಮೀನಾ ಕೊಲೆಯಾದ ದುರ್ದೈವಿ. ಮೀನಾ ಸೂರ್ಲಬ್ಬಿ ಸುಬ್ರಮಣಿ ಅವರ ಕಿರಿಯ ಪುತ್ರಿ. ಈಕೆಗೆ ಮೂವರು ಅಕ್ಕಂದಿರು ಮತ್ತು ಇಬ್ಬರು ಅಣ್ಣಂದಿರು ಇದ್ದರು.
ಗುರುವಾರ ಎಸ್. ಎಸ್. ಎಲ್. ಸಿ. ಪರೀಕ್ಷೆ ಫಲಿತಾಂಶ ಬಂದಾಗ ಮೀನಾ ಉತ್ತೀರ್ಣ ಆಗಿದ್ದಳು.
ಸೂರ್ಲಬ್ಬಿ ಶಾಲೆಯ ಹತ್ತನೇ ತರಗತಿಯಲ್ಲಿ ಏಕೈಕ ವಿದ್ಯಾರ್ಥಿನಿ ಈಕೆ. ಆದರೆ ನಿನ್ನೆ ಈಕೆಯ ಪೋಷಕರು ಮೀನಾಳ ಮದುವೆ ನಿಶ್ಚಿತಾರ್ಥಕ್ಕೆ ಮುಂದಾಗಿದ್ದರು.
16 ವರ್ಷದ ಮೀನಾ ಜೊತೆ 32 ವರ್ಷದ ಪ್ರಕಾಶ್ ನನ್ನು ಮದುವೆ ಮಾಡಲು ನಿಶ್ಚಿತಾರ್ಥ ಸಿದ್ಧತೆ ನಡೆದಿತ್ತು. ಆದರೆ ಈ ವಿಷಯ ಮಕ್ಕಳ ಸಹಾಯವಾಣಿಗೆ ಯಾರೋ ತಿಳಿಸಿದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ನಿಶ್ಚಿತಾರ್ಥ ತಡೆದಿದ್ದರು. ಎರಡು ಕಡೆಯವರಿಗೆ ತಿಳುವಳಿಕೆ ನೀಡಿ 18 ವರ್ಷ ಆದ ನಂತರವೇ ಮದುವೆ ಕಾರ್ಯಕ್ರಮ ಇಟ್ಟುಕೊಳ್ಳುವಂತೆ ಸೂಚಿಸಿದ್ದರು. ಇದನ್ನು ಉಭಯ ಕಡೆಯವರು ಒಪ್ಪಿಕೊಂಡಿದ್ದರು.
ಆದರೆ, ಸಂಜೆ 5.30 ರ ವೇಳೆಗೆ ನಿಶ್ಚಿತಾರ್ಥ ನಿಂತು ಹೋದ ಹಿನ್ನೆಲೆ ಕೆರಳಿದ ಪ್ರಕಾಶ್ ಮತ್ತೆ ಮೀನಾಳ ಮನೆಗೆ ತೆರಳಿ ಆಕೆಯ ತಂದೆ ಹಾಗೂ ತಾಯಿಯ ಮೇಲೆ ಹಲ್ಲೆ ಮಾಡಿದ ಪ್ರಕಾಶ್, ಮನೆಯಿಂದ ಮೀನಾಳನ್ನು ಸುಮಾರು 100 ಮೀಟರ್ ಹೊರಕ್ಕೆ ಎಳೆದುಕೊಂಡು ಹೋಗಿ ಅಲ್ಲಿಯೇ ಮೀನಾಳ ದೇಹವನ್ನು ಕತ್ತರಿಸಿ ತಲೆಯನ್ನು ಕೂಡ ತುಂಡು ಮಾಡಿದ. ನಂತರ ದುಷ್ಕರ್ಮಿ ಪ್ರಕಾಶ್ ಆಕೆಯ ರುಂಡದೊಂದಿಗೆ ಪರಾರಿಯಾದ. ವಿಷಯ ತಿಳಿಯುತ್ತಿದ್ದಂತೆ ರಾತ್ರಿ ಕೊಡಗು ಜಿಲ್ಲಾ ಪೊಲೀಸ್ ಉನ್ನತಾಧಿಕಾರಿ ರಾಮರಾಜನ್ ಮತ್ತು ಸೋಮವಾರಪೇಟೆ ತಾಲೂಕು ಡಿ. ವೈ. ಎಸ್. ಪಿ ಗಂಗಾಧರಪ್ಪ ಪೊಲೀಸರ ಸಹಿತ ಸ್ಥಳಕ್ಕೆ ತೆರಳಿ ಆರೋಪಿ ಪತ್ತೆಗಾಗಿ ಬಿರುಸಿನ ತನಿಖೆ ಕೈಗೊಂಡಿದ್ದಾರೆ ಎಂದು ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮಾಹಿತಿ ನೀಡಿದ್ದಾರೆ. ಸ್ಥಳದಲ್ಲಿ ಪೊಲೀಸರು ಮೊಕ್ಕಂ ಹೂಡಿದ್ದು ಆರೋಪಿಯ ಪತ್ತೆಗೆ ಬಲೆಯನ್ನು ಬೀಸಿದ್ದಾರೆ.