ಪ್ರಜಾಪಥ ವಾರ್ತೆ
ಗದಗ: ತಾಲೂಕಿನ ಹುಲಕೋಟಿಯ ಸ್ವಾಮಿ ವಿವೇಕಾನಂದ ಪಿಯು ಕಾಲೇಜ್ ಆವರಣದಲ್ಲಿ ಕೆ.ಎಚ್. ಪಾಟೀಲ ಸೆಂಟರ್ ಫಾರ್ ಹ್ಯೂಮನ್ ಎಕ್ಸಲೆನ್ಸ್ ವತಿಯಿಂದ ಸಹಕಾರ ಭೀಷ್ಮ ಕೆ.ಎಚ್. ಪಾಟೀಲ ಜನ್ಮ ಶತಮಾನೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಆರ್‌ಎಂಎಸ್ ಸಂಸ್ಥೆಯ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಟ್ಟಡ ಉದ್ಘಾಟನೆ ಮೇ 19ರಂದು ಸಂಜೆ 4ಕ್ಕೆ ಜರುಗಲಿದೆ.
ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಅವರು ಉದ್ಘಾಟಿಸುವರು. ಮಾಜಿ ಶಾಸಕ, ಕೆ.ಎಚ್. ಪಾಟೀಲ ಪ್ರತಿಷ್ಠಾನದ ಅಧ್ಯಕ್ಷ ಡಿ.ಆರ್. ಪಾಟೀಲ ಅಧ್ಯಕ್ಷತೆ ವಹಿಸುವರು. ಹಾವೇರಿ ಜಿಲ್ಲೆಯ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಉಪಕುಲಪತಿ ಡಾ| ಟಿ.ಎಂ. ಭಾಸ್ಕರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.
ಇದೇ ವೇಳೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಸಮೃದ್ಧಿ ಶ್ರೀಧರ ಸಿದ್ಲಿಂಗ್ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ತೃತೀಯ ಸ್ಥಾನ ಪಡೆದ ಸ್ವಾಮಿ ವಿವೇಕಾನಂದ ಪಿಯು ಕಾಲೇಝಿನ ವಿದ್ಯಾರ್ಥಿನಿ ವಿದ್ಯಾ ಮುದರಡ್ಡಿ ಅವರಿಗೆ ಸನ್ಮಾನ ಜರುಗಲಿದೆ ಎಂದು ಕೆ.ಎಚ್. ಪಾಟೀಲ ಪ್ರತಿಷ್ಠಾನ ಹಾಗೂ ಆರ್‌ಎಂಎಸ್ ಸಂಸ್ಥೆಯ ಪದಾಧಿಕಾರಿಗಳು ತಿಳಿಸಿದ್ದಾರೆ.