ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮ
ಜಿಲ್ಲಾ ಕ.ಸಾ.ಪ.ವತಿಯಿಂದ ಕವಿಯಿತ್ರಿ ಕೆ.ಜಿ.ರಮ್ಯರಿಗೆ ‘ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ
ಪ್ರಜಾಪಥ ವಾರ್ತೆ
ಕುಶಾಲನಗರ ( ಕೊಡಗು ) : ಕವಿತೆ ರಚನೆಗೆ ಯಾವುದೇ ಛಂದ, ಬಂಧ ,ಪ್ರಾಸ, ಧೋರಣೆ, ವಸ್ತು, ಆಶಯಗಳಂತಹ ಸಿದ್ದ ರಚನೆ ಇರಬೇಕಿಲ್ಲ. ವಾಸ್ತವಿಕ ನೆಲೆಗಟ್ಟಿನಲ್ಲಿ ಭಾವನಾತ್ಮಕ ಸನ್ನಿವೇಶದಲ್ಲಿ ಸ್ವಾಭಾವಿಕವಾಗಿ ಹುಟ್ಟಿಕೊಳ್ಳುವ ಕವಿತೆಗಳು ಗಟ್ಟಿಯಾಗಿ ನೆಲೆಯೂರುತ್ತವೆ ಎಂದು ಮಡಿಕೇರಿ ತಾಲ್ಲೂಕಿನ ಗಾಳಿಬೀಡು ಜವಹರ್ ನವೋದಯ ವಿದ್ಯಾಲಯದ ಕನ್ನಡ ಅಧ್ಯಾಪಕರೂ ಆದ ಸಾಹಿತಿ ಮಾರುತಿ ದಾಸಣ್ಣನವರ್ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ( ಕ.ಸಾ.ಪ.), ಕುಶಾಲನಗರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಸಹಯೋಗದೊಂದಿಗೆ ಕುಶಾಲನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ 2023-24 ನೇ ಸಾಲಿನ ಕಥೆಗಾರ್ತಿ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿಯನ್ನು ಮೂರ್ನಾಡಿನ ಕವಿಯಿತ್ರಿ, ಶಿಕ್ಷಕಿ ಕೆ.ಜಿ.ರಮ್ಯ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಕವಿತೆ – ಕಾವ್ಯ ರಚನೆ ಕುರಿತು ಮಾತನಾಡಿದರು.
ಕವಿಯಿತ್ರಿ ಕೆ.ಜಿ.ರಮ್ಯ ಅವರ “ದಾಹಗಳ ಮೈ ಸವರುತ್ತಾ” ಕವನ ಸಂಕಲನದ ಕವನಗಳಲ್ಲಿ ಕವನಗಳು ಶೋಷಿತ ಮಹಿಳೆಯರ ನೋವು- ನಲಿವುಗಳ ಬಗ್ಗೆ ಬೆಳಕು ಚೆಲ್ಲತ್ತವೆ.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಗೌರಮ್ಮ ದತ್ತಿ ಪ್ರಶಸ್ತಿ ಆರಂಭದ ಹಂತದಲ್ಲಿ ಜಿಲ್ಲೆಯಲ್ಲಿದ್ದ ಮಹಿಳಾ ಬರಹಗಾರರ ಕೊರತೆ ಇದೀಗ ನೀಗಿದ್ದು, ಇಂದು ಜಿಲ್ಲೆಯಲ್ಲಿ ಹೆಚ್ಚಿನ ಮಹಿಳಾ ಸಾಹಿತಿಗಳು ಬೆಳೆದಿರುವುದು ಜಿಲ್ಲೆಯಲ್ಲಿ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.
ಮುಖ್ಯ ಭಾಷಣ ಮಾಡಿದ ಸಾಹಿತಿ, ಗೌರಮ್ಮ ದತ್ತಿ ಪ್ರಶಸ್ತಿ ಪುರಸ್ಕೃತರಾದ ಸುನಿತಾ ಲೋಕೇಶ್ , ಮಹಿಳಾ ಸಾಹಿತ್ಯದ ಬೆಳವಣಿಗೆ ಹಾಗೂ ಕೊಡಗಿನ ಕಥೆಗಾರ್ತಿ ಗೌರಮ್ಮ ಅವರ ಕಥೆಗಳ ಕುರಿತು ವಿವರಣೆ ನೀಡುತ್ತಾ, ಕೊಡಗಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಬರಹಗಾರರ ಸಂಖ್ಯೆ ವೃದ್ಧಿಸುತ್ತಿರುವುದು ಶ್ಲಾಘನೀಯವಾದುದು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕ.ಸಾ.ಪ. ಗೌರವ ಕಾರ್ಯದರ್ಶಿ ಎಸ್.ಐ.ಮುನಿರ್ ಅಹ್ಮದ್, ಮಹಿಳಾ ಬರಹಗಾರರ ಬರವಣಿಗೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಜಿಲ್ಲಾ ಕ.ಸಾ.ಪ.ವತಿಯಿಂದ ನೀಡುವ ಕೊಡಗಿನ ಪ್ರತಿಷ್ಠಿತ ಪ್ರಶಸ್ತಿಯಾದ ಗೌರಮ್ಮ ದತ್ತಿ ಪ್ರಶಸ್ತಿ ಈ ಬಾರಿ ಕವಿಯಿತ್ರಿ ಕೆ.ಜಿ. ರಮ್ಯ ಅವರ ‘ದಾಹಗಳ ಮೈ ಸವರುತ್ತಾ’ ಎಂಬ ಕವನ ಸಂಕಲನಕ್ಕೆ ಲಭಿಸಿದೆ.
ಸ್ವಾತಂತ್ರ್ಯ ಸಂಗ್ರಾಮದ ವೇಳೆಯಲ್ಲಿ ಮಹಾತ್ಮ ಗಾಂಧೀಜಿಯವರ ತತ್ವ, ಆದರ್ಶ ಮೈಗೂಡಿಸಿಕೊಂಡ ಕಥೆಗಾರ್ಥಿ ಗೌರಮ್ಮ , ಪ್ರಗತಿಪರ ಚಿಂತನೆ ಮತ್ತು ಆಲೋಚನೆಗಳಿಂದ ತಮ್ಮ ಕಥೆಗಳಲ್ಲಿ ಮಹಿಳೆಯರ ಧ್ವನಿಯನ್ನು ಪ್ರತಿಬಿಂಬಿಸಿದ್ದಾರೆ ಎಂದರು.
ಗೌರಮ್ಮ ಪ್ರಶಸ್ತಿ ಪುರಸ್ಕೃತರಾದ ಕೆ.ಜಿ.ರಮ್ಯ , ತಾವು ಕವನ ರಚಿಸಲು ತಮ್ಮ ಪರಿಸರದಲ್ಲಿ ಸಿಕ್ಕಿದ ಪ್ರೇರಣೆ ಹಾಗೂ ಸ್ನೇಹಿತರು ಮತ್ತು ಕುಟುಂಬದ ಸಹಕಾರವನ್ನು ಸ್ಮರಿಸಿದರು.
ಕಥಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿದ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಎಸ್. ಸುನಿಲ್ ಕುಮಾರ್ , ಇಂತಹ ಸಾಹಿತ್ಯ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಸಹಕಾರಿಯಾಗಿವೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಎಂ.ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕ.ಸಾ.ಪ.ಗೌರವ ಕಾರ್ಯದರ್ಶಿ ರೇವತಿ ರಮೇಶ್, ಪ್ರಶಸ್ತಿ ಪುರಸ್ಕೃತರಾದ ಕೆ.ಜಿ.ರಮ್ಯ ಪರಿಚಯ ಮಾಡಿದರು. ಜಿಲ್ಲಾ ಕ.ಸಾ.ಪ. ಸಮಿತಿ ನಿರ್ದೇಶಕ ಮೆ.ನಾ. ವೆಂಕಟನಾಯಕ್, ಮಡಿಕೇರಿ ತಾಲ್ಲೂಕು ಕ.ಸಾ.ಪ.ಅಧ್ಯಕ್ಷ ಕಡ್ಲೇರ ತುಳಸಿ, ಕುಶಾಲನಗರ ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ಕೆ.ಎಸ್. ನಾಗೇಶ್, ಕೋಶಾಧಿಕಾರಿ ಕೆ.ವಿ.ಉಮೇಶ್ , ಹೆಬ್ಬಾಲೆ ಹೋಬಳಿ ಕ.ಸಾ.ಪ. ಅಧ್ಯಕ್ಷ ಎಂ.ಎನ್.ಮೂರ್ತಿ, ಕವಿಯಿತ್ರಿ ಅವರ ತಾಯಿ ಬೇಬಿ ಮತ್ತು ಅವರ ಪತಿ ಪ್ರವೀಣ್ ಸೂಡ ಸೇರಿದಂತೆ ಮಹಿಳಾ ಸಾಹಿತಿಗಳು, ಬರಹಗಾರರು, ಕ.ಸಾ.ಪ.ಸದಸ್ಯರು, ಉಪನ್ಯಾಸಕರು,ವಿದ್ಯಾರ್ಥಿಗಳು
ಇದ್ದರು. ಉಪನ್ಯಾಸಕ ಎಸ್.ಆರ್.ಚರಣರಾಜ್ ಸ್ವಾಗತಿಸಿದರು. ತಾಲ್ಲೂಕು ಕ.ಸಾ.ಪ.ಅಧ್ಯಕ್ಷ ಕೆ.ಎಸ್.ನಾಗೇಶ್
ವಂದಿಸಿದರು. ಡಾ ಎಸ್.ಸುನಿಲ್ ಕುಮಾರ್ ನಿರ್ವಹಿಸಿದರು. ಕವಿಯಿತ್ರಿ ರಮ್ಯ ಅವರ ಕವನಗಳನ್ನು ಸೌಮ್ಯಶೆಟ್ಟಿ ಮತ್ತು ಮಂಜುಳಾ ಚಿತ್ತಾಪುರ್ ವಾಚಿಸಿದರು.
ಶ್ರದ್ಧಾಂಜಲಿ: ಮೌನಾಚರಣೆ
ಕಾರ್ಯಕ್ರಮದ ಆರಂಭಕ್ಕೂ ಮುನ್ನ ಸೋಮವಾರ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಇರಾನ್ ದೇಶದ ಅಧ್ಯಕ್ಷ ಸಯ್ಯದ್ ಇಬ್ರಾಹಿಂ ರೈಸಿ ಮತ್ತು ಇತರರ ಸ್ಮರಣಾರ್ಥ ಸಭೆಯಲ್ಲಿ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.