ಕೂಡಿಗೆ ಮೊರಾರ್ಜಿ ಶಾಲೆಯಲ್ಲಿ ಸ್ಕೌಟ್ಸ್, ಗೈಡ್ಸ್ ಕುರಿತ ಮಾಹಿತಿ
ಪದ್ಮಶ್ರೀ ಪುರಸ್ಕೃತ ರಾಣಿ ಮಾಚಯ್ಯ
ಪ್ರಜಾಪಥ ವಾರ್ತೆ
ಕುಶಾಲನಗರ (ಕೊಡಗು): ಸ್ಕೌಟ್ಸ್ ಮತ್ತು ಗೈಡ್ಸ್ ಗಳು ಸನ್ನಡತೆ,ಸದ್ಭಾವನೆ, ಶಿಸ್ತು ಮತ್ತು ಸೇವಾ ಮನೋಭಾವನೆಗಳಂತಹ ಶಿಕ್ಷಣವನ್ನು ನೀಡುವುದರೊಂದಿಗೆ ಭಾರತದ ಸಂಪನ್ಮೂಲ ವ್ಯಕ್ತಿಯಾಗಿ ರೂಪಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆಯ ಜಿಲ್ಲಾ ಗೈಡ್ಸ್ ಆಯುಕ್ತರೂ ಆದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಣಿ ಮಾಚಯ್ಯ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆ ಹಾಗೂ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸಂಘಟನೆ ವಿಶ್ವ ಬಾಲ ಕಾರ್ಮಿಕರ ದಿನಾಚರಣೆಯ ಮಹತ್ವ ಕುರಿತು ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು, ಜೂನ್ 18 ರಿಂದ 24 ರ ವರೆಗೆ ಮಡಿಕೇರಿ ತಾಲ್ಲೂಕಿನ ಗಾಳಿಬೀಡು ನವೋದಯ ಶಾಲೆಯಲ್ಲಿ ಶಾಲಾ ಶಿಕ್ಷಕರಿಗೆ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಚಟುವಟಿಕೆಗಳ ಕುರಿತು ಏರ್ಪಡಿಸಿರುವ ಮೂಲ ತರಬೇತಿ ಹಾಗೂ ಅಡ್ವಾನ್ಸ್ಡ್ ತರಬೇತಿಯ ಕುರಿತು ಮಾಹಿತಿ ನೀಡಿ, ಈ ತರಬೇತಿಯಲ್ಲಿ ಶಿಕ್ಷಕರು ಭಾಗವಹಿಸುವ ಮೂಲಕ ಉತ್ತಮ ತರಬೇತಿ ಹೊಂದಬೇಕು ಎಂದರು.
ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್ ಮಾತನಾಡಿದರು.
ಶಾಲೆಯ ಪ್ರಾಂಶುಪಾಲ ಕೆ.ಪ್ರಕಾಶ್ ಮಾತನಾಡಿ, ಯಾವುದೇ ವಿದ್ಯಾರ್ಥಿಯು ಶಿಕ್ಷಣದಿಂದ ವಂಚಿತವಾಗದೆ ಉತ್ತಮ ಶಿಕ್ಷಣ ಪಡೆದು ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳಬೇಕಿದೆ ಎಂದರು.
ನಮ್ಮ ಶಾಲೆಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಣಿ ಮಾಚಯ್ಯ ಅವರು ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿ ಮಕ್ಕಳಲ್ಲಿ ಉತ್ತಮ ಕಲಿಕಾ ಪ್ರೇರಣೆ ನೀಡಿರುವುದು ತುಂಬಾ ಸಂತಸದ ಸಂಗತಿ ಎಂದರು.
ಜಿಲ್ಲಾ ಗೈಡ್ಸ್ ನ ಸಹಾಯಕ ಆಯುಕ್ತೆ ಸಿ.ಎಂ.ಸುಲೋಚನಾ, ನಿಲಯ ಪಾಲಕ ಜಗದೀಶ್, ಶಾಲೆಯ ಶಿಕ್ಷಕರಾದ ಎಸ್.ಕೆ. ಚದಂಬರ, ನಾಗೇಂದ್ರ, ಎಚ್.ಬಿ.ದಿನೇಶಾಚಾರಿ, ಗಾನವಿ, ಹರಿಣಾಕ್ಷಿ ಇತರರು ಇದ್ದರು.
ಇದೇ ವೇಳೆಯಲ್ಲಿ ಭಾರತ್ ಸ್ಕೌಟ್ಸ್, ಗೈಡ್ಸ್ ಸಂಸ್ಥೆ ಹಾಗೂ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ವತಿಯಿಂದ ಶಾಲಾವರಣದಲ್ಲಿ ಪರಿಸರ ಸಂಭ್ರಮದ ಅಂಗವಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ರಾಣಿ ಮಾಚಯ್ಯ ಗಿಡ ನೆಟ್ಟರು.
ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್ ಪರಿಸರ ಪ್ರತಿಜ್ಞಾ ವಿಧಿ ಬೋಧಿಸಿದರು. ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಸಂಬಂಧಿಸಿದಂತೆ ಘೋಷಣೆಗಳನ್ನು ಕೂಗಿದರು.