- ಗದಗ-ಬೆಟಗೇರಿ ನಗರಸಭೆ ವಖಾರಸಾಲು ಚರ್ಚೆ ಮತ್ತೆ ಮುನ್ನಲೆಗೆ
- ಮಾಜಿ ಅಧ್ಯಕ್ಷೆ, ಇಬ್ವರು ಸದಸ್ಯರು ಸೇರಿ 6 ಜನರ ವಿರುದ್ಧ ದೂರು ದಾಖಲು
- ವಕಾರ ಸಾಲು ಅಕ್ರಮ ಲೀಸ್ ನೀಡಿದ ಆರೋಪದಡಿ ದೂರು ದಾಖಲು
ಪ್ರಜಾಪಥ ವಾರ್ತೆ
ಗದಗ: ಗದಗ-ಬೆಟಗೇರಿ ನಗರಸಭೆ ಮಾಲಿಕತ್ವದ 54 ವಕಾರ ಸಾಲುಗಳನ್ನು ಕಾನೂನು ಬಾಹಿರವಾಗಿ ಲೀಜ್ ಗೆ ನೀಡಿದ ಆರೋಪದಡಿ ನಗರಸಭೆ ಮಾಜಿ ಅಧ್ಯಕ್ಷೆ, ಇಬ್ವರು ಸದಸ್ಯರು ಸೇರಿ 6 ಜನರ ವಿರುದ್ಧ ದೂರು ದಾಖಲಾಗಿದೆ.
ನಗರಸಭೆ ಮಾಜಿ ಪ್ರಭಾರ ಪೌರಾಯಕ್ತ ಪ್ರಶಾಂತ ವರಗಪ್ಪನವರ ಅವರು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಗರಸಭೆ ಮಾಜಿ ಅಧ್ಯಕ್ಷೆ, ನಗರಸಭೆ ಬಿಜೆಪಿ ಸದಸ್ಯರಾದ ಅನಿಲ ಅಬ್ಬಿಗೇರಿ, ಗೂಳಪ್ಪ ಮುಶಿಗೇರಿ, ನೆಹರು ರಸ್ತೆಯ ಕೃತಪುರ ಜಿನ್ನಿಂಗ್ ಕಾಂಪೌಂಡ್ ನ ದಿ ಕಾಟನ್ ಮಾರ್ಕೆಟ್ ವರ್ಕ್ಸ್ ಓನರ್ ಅಸೋಸಿಯೇಷನ್ ಕಾರ್ಯದರ್ಶಿ, ವಿಜಯಲಕ್ಷ್ಮಿ ಶಿಗ್ಲಿಮಠ ಹಾಗೂ ಮತ್ತೋರ್ವ ಖಾಸಗಿ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ.
ವಿಜಯಲಕ್ಷ್ಮಿ ಶಿಗ್ಲಿಮಠ ಅವರನ್ನು ಎ1 ಆರೋಪಿಯನ್ನಾಗಿ ಮಾಡಲಾಗಿದ್ದು, ನಗರಸಭೆ ಸದಸ್ಯ ಅನಿಲ ಅಬ್ಬಿಗೇರಿ ಎ3, ಗೂಳಪ್ಪ ಮುಶಿಗೇರಿ ಎ4, ಹಾಗೂ ದೂರಿನಲ್ಲಿ ಹೆಸರನ್ನು ನಮೂದಿಸದೇ ಕೇವಲ ನಗರಸಭೆ ಮಾಜಿ ಅಧ್ಯಕ್ಷೆಯನ್ನು ಎ5 ಆರೋಪಿಯನ್ನಾಗಿ ಮಾಡಿ ದೂರು ದಾಖಲಿಸಲಾಗಿದೆ.
2023ರ ಅಕ್ಟೋಬರ್ 25ರಿಂದ 2024ರ ಜುಲೈ 22ರ ನಡುವಿನ ಅವಧಿಯಲ್ಲಿ ಗದಗ-ಬೆಟಗೇರಿ ಮಾಲೀಕತ್ವದ ಸಾವಿರಾರು ಕೋಟಿ ರೂ. ಮೌಲ್ಯದ 54 ವಕಾರಸಾಲುಗಳನ್ನು ಕಾನೂನು ಬಾಹಿರವಾಗಿ ದೀರ್ಘ ಅವಧಿಗೆ ಒಪ್ಪಂದ ಮಾಡಿಕೊಂಡು ಸುಳ್ಳು ಠರಾವು ಸೃಷ್ಟಿಸಿದ ಆರೋಪದಡಿ ದೂರು ದಾಖಲಿಸಲಾಗಿದೆ.
2024ರ ಫೆಬ್ರವರಿ 9ರಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಠರಾವು ಪಾಸಾಗಿದೆ ಎಂದು ನಕಲಿ ಠರಾವು ಸೃಷ್ಟಿಸಿ 2024ರ ಜುಲೈ 22ರಂದು ವಕಾರಸಾಲಿನ ಎಲ್ಲ ಅನುಭೋಗದಾರರಿಗೆ ಕಬ್ಜಾ ನೀಡಲಾಗಿದೆ ಎಂದು ನಕಲಿ ಪತ್ರವನ್ನು ಸೃಷ್ಟಿಸಿ ಎರಡೂ ದಾಖಲೆಗಳಿಗೆ ಪಿರ್ಯಾದಿದಾರರ ನಕಲಿ ಸಹಿಯನ್ನು ಮಾಡಿ ಗದಗ-ಬೆಟಗೇರಿ ನಗರಸಭೆಗೆ ಹಾಗೂ ಸರಕಾರಕ್ಕೆ ಮೋಸ ಮಾಡಿದ ಆರೋಪದಡಿ ದೂರು ದಾಖಲಾಗಿದೆ. ಅಂದು ನಗರಸಭೆ ಪ್ರಭಾರ ಪೌರಾಯುಕ್ತರಾಗಿದ್ದ ಪ್ರಶಾಂತ ವರಗಪ್ಪನವರ ಅವರೇ ದೂರುದಾರರಾಗಿರುವುದು ವಿಶೇಷವಾಗಿದೆ.
ಈ ಕುರಿತು ನಗರಸಭೆ ಪ್ರಭಾರ ಪೌರಾಯುಕ್ತರಾಗಿದ್ದ ಹಾಗೂ ಪ್ರಸ್ತುತ ಹಾವೇರಿ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾಗಿರುವ ಪ್ರಶಾಂತ ವರಗಪ್ಪನವರ ಅವರು ಪ್ರತಿಕ್ರಿಯಿಸಿ ಒಟ್ಟು 6 ಜನರ ವಿರುದ್ಧ ದೂರು ದಾಖಲಿಸಲಾಗಿತ್ತು. ಪ್ರಕರಣ ತನಿಖಾ ಹಂತದಲ್ಲಿದ್ದು ತನಿಖೆ ಬಳಿಕ ಸತ್ಯಾಂಶ ತಿಳಿಯಲಿದೆ ಎಂದು ಪ್ರಜಾಪಥ ಕ್ಕೆ ಮಾಹಿತಿ ನೀಡಿದರು.