- ಕೋಲ್ಕತ್ತಾದ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಬರ್ಬರ ಕೊಲೆಯನ್ನು ಖಂಡಿಸಿ ಬಂದ್
- ಜನತೆ ಸಹಕರಿಸಲು ಗದಗ ಐ.ಎಂ.ಎ ಮನವಿ
ಪ್ರಜಾಪಥ ವಾರ್ತೆ
ಗದಗ: ಕೋಲ್ಕತ್ತಾದ ಆರ್.ಜಿ. ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಬರ್ಬರ ಕೊಲೆಯನ್ನು ಖಂಡಿಸಿ ಹಾಗೂ ಸರ್ಕಾರವು ನಿರ್ವಹಿಸುತ್ತಿರುವ ರೀತಿಯನ್ನು ವಿರೋಧಿಸಿ ಆ. 17 ರಂದು ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಆ. 18 ರಂದು ರವಿವಾರ ಬೆಳಗಿನ 6 ಗಂಟೆಯವರೆಗೆ 24 ಗಂಟೆಗಳ ಕಾಲ ಗದಗ ಜಿಲ್ಲೆಯ ಖಾಸಗಿ ಆಸ್ಪತ್ರೆಗಳನ್ನು ಬಂದ್ ಮಾಡಿ ಪ್ರತಿಭಟಿಸಲು ಗದಗ ಐಎಂಎ ತಿಳಿಸಿದೆ,
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಗದಗ ಐಎಂಎ, ಅಂದು ಜಿಲ್ಲೆಯ ಅಲೋಪತಿ ವೈದ್ಯರುಗಳ ಎಲ್ಲ ಆಸ್ಪತ್ರೆಗಳು ಬಂದ್ ಇರುತ್ತವೆ. ಕೇಂದ್ರ ಐಎಂಎ ದೇಶದಾದ್ಯಂತ ಕರೆ ನೀಡಿದ್ದರನ್ವಯ ಗದಗ ಜಿಲ್ಲೆಯ ಅಲೋಪತಿ ವೈದ್ಯರುಗಳ ಎಲ್ಲ ಆಸ್ಪತ್ರೆಗಳು ಬಂದ್ ಮಾಡಿ ಪ್ರತಿಭಟಿಸಲಿದ್ದಾರೆ.
ಆ. 17 ರಂದು ಶನಿವಾರ ಮುಂಜಾನೆ 9 ಗಂಟೆಗೆ ಗದಗ ಐಎಂಎ ದಲ್ಲಿ ಎಲ್ಲ ವೈದ್ಯರುಗಳು ಸಂಘಟಿತರಾಗಿ, ಬಳಿಕ 9-30 ಗಂಟೆಗೆ ಗದಗ ಐಎಂಎ ದಿಂದ ನಗರದ ಮಹಾತ್ಮಾ ಗಾಂಧಿ ಸರ್ಕಲ್‌ವರೆಗೆ ಶಾಂತ ರೀತಿಯ ಮೆರವಣಿಗೆ ಕೈಗೊಂಡು ಅಲ್ಲಿಂದ ಐಎಂಎ ಪದಾಧಿಕಾರಿಗಳ ನಿಯೋಗವು ಗದಗ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಗುವದು.
ಭಾರತೀಯ ಮಹಿಳೆಯರಿಗೆ, ಮಹಿಳಾ ವೈದ್ಯರಿಗೆ ಎಲ್ಲ ರೀತಿಯ ಸುರಕ್ಷತೆ ಸಿಗಬೇಕೆಂಬ ಸದುದ್ದೇಶದಿಂದ ನಡೆಸುತ್ತಿರುವ ಈ ಮುಷ್ಕರಕ್ಕೆ ಸಾರ್ವಜನಿಕರೂ ಸಾಮಾಜಿಕ ಕಳಕಳಿಯೊಂದಿಗೆ ಬೆಂಬಲಿಸಿ ಸಹಕರಿಸಬೇಕೆಂದು ಗದಗ ಐಎಂಎ ಅಧ್ಯಕ್ಷ ಡಾ.ಜಿ.ಎಸ್.ಪಲ್ಲೇದ, ಕಾರ್ಯದರ್ಶಿ ಡಾ.ಚಂದ್ರಶೇಖರ ಬಳ್ಳಾರಿ ವಿನಂತಿಸಿದ್ದಾರೆ.
ಎಲ್ಲ ಆಸ್ಪತ್ರೆಗಳಲ್ಲಿ ತುರ್ತು ಸಂದರ್ಭದಲ್ಲಿ (ಎಮರ್ಜೆನ್ಸಿ) ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನು ಬಿಟ್ಟರೆ ಉಳಿದೆಲ್ಲ ವೈದ್ಯಕೀಯ ಸೇವೆಗಳು 24 ಗಂಟೆಗೆ ಸ್ಥಗಿತಗೊಂಡಿರುತ್ತವೆ.
-ಡಾ.ಜಿ.ಎಸ್. ಪಲ್ಲೇದ, ಅಧ್ಯಕ್ಷರು,ಗದಗ ಐಎಂಎ