ನಾಳೆ (ರವಿವಾರ) ಅಂತಿಮಯಾತ್ರೆ-ಮಲ್ಲಸಮುದ್ರ ಪೊಲೀಸ್ ವಸತಿ ಸಂಕೀರ್ಣದಿಂದ ಅಂತಿಮ ಯಾತ್ರೆ
ಪ್ರಜಾಪಥ ವಾರ್ತೆ
ಗದಗ: ಕೈದಿಗಳನ್ನು ಪೊಲೀಸ್ ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದ ಚಾಲಕ ಪೇದೆಯೋರ್ವನಿಗೆ ತೀವ್ರ ಎದೆನೋವು ಕಾಣಿಸಿಕೊಂಡು, ಕಾರ್ಡಿಯಾಕ್ ಅರೆಸ್ಟ್ ನಿಂದಾಗಿ ಸಾವನ್ನಪ್ಪಿರುವ ಘಟನೆ ಶನಿವಾರ ಧಾರವಾಡದಲ್ಲಿ ನಡೆದಿದೆ.
ಗದಗ ಜಿಲ್ಲೆಯ ಜಿಲ್ಲಾ ಸಶಸ್ತ್ರ ಮೀಸಲು (ಡಿಎಆರ್) ಪಡೆಯ ಪೊಲೀಸ್ ವಾಹನ ಚಾಲಕ ಬಸವರಾಜ ವಿಠಲಾಪೂರ (41) ಮೃತರು.ಮೃತರಿಗೆ ಪತ್ನಿ, ಮೂವರು ಮಕ್ಕಳು ಇದ್ದಾರೆ.
ಕಾರಾಗೃಹ ಕೈದಿಗಳ ಬದಲಾವಣೆ ಹಿನ್ನೆಲೆಯಲ್ಲಿ ಗದಗ ಸಬ್‌ಜೈಲ್‌ನಿಂದ 7 ಕೈದಿಗಳನ್ನು ಧಾರವಾಡ ಜೈಲಿಗೆ ಪೊಲೀಸ್ ವಾಹನದಲ್ಲೇ ಕರೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ವಾಹನವು ಧಾರವಾಡದ ಜುಬಿಲಿ ಸರ್ಕಲ್ ಬಳಿ ತಲುಪುತ್ತಿದ್ದಂತೆ ತೀವ್ರವಾಗಿ ಎದೆನೋವು ಕಾಣಿಸಕೊಂಡಿದೆ.
ಈ ಸಂದರ್ಭದಲ್ಲಿ ಕಾರ್ಡಿಯಾಕ್ ಅರೆಸ್ಟ್ ನಿಂದ ನಿತ್ರಾಣಗೊಂಡಿದ್ದ ಪೇದೆಯನ್ನು ಕೂಡಲೇ ಜುಬಿಲಿ ಸರ್ಕಲ್ ಬಳಿಯ ಜರ್ಮನ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಸಂತಾಪ: ಡಿಎಆರ್ ಪೇದೆ ಬಸವರಾಜ ವಿಠಲಾಪೂರ ಅವರ ನಿಧನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಡಿಎಆರ್ ಡಿವೈಎಸ್ಪಿ ವಿದ್ಯಾನಂದ ನಾಯಕ ಸೇರಿ ಪೊಲೀಸ್ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.