ಶಾಲಾ-ಕಾಲೇಜುಗಳಿಗೆ ರಜೆ ಇದೆಯೋ.. ಇಲ್ಲವೋ?-ಗೊಂದಲ ಪರಿಹರಿಸಿದ ಪ್ರಾದೇಶಿಕ ಆಯುಕ್ತರು
ಸೋಮವಾರ (ಜೂ.13) ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ
ಪ್ರಜಾಪಥ ವಾರ್ತೆ
ಗದಗ/ಬೆಳಗಾವಿ: ಜೂ.13 ರಂದು ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರ ಸೇರಿ ವಿಧಾನ ಪರಿಷತ್ ನ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮತದಾನ ದಿನದಂದು ಸಾರ್ವತ್ರಿಕ ರಜೆ ಇಲ್ಲ ಎಂದು ಈ ಬಗ್ಗೆ ಇದ್ದ ಗೊಂದಲವನ್ನು ಸರ್ಕಾರ ಸ್ಪಷ್ಟಪಡಿಸಿದೆ.
ಭಾರತ ಚುನಾವಣಾ ಆಯೋಗದ ಸೂಚನೆಯಂತೆ ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಜೂನ್ 13 ರಂದು ನಡೆಯಲಿರುವ ಮತದಾನದ ದಿನದಂದು ಶಿಕ್ಷಣ ಸಂಸ್ಥೆಗಳಿಗೆ ಸಾರ್ವತ್ರಿಕ ರಜೆ ಇಲ್ಲವೆಂದು ಪ್ರಾದೇಶಿಕ ಆಯುಕ್ತರು ಹಾಗೂ ಚುನಾವಣಾಧಿಕಾರಿಗಳು ಪತ್ರ ಸಂಖ್ಯೆ: ಕ್ರ.ಪ್ರಾಆಬೆ: ಎಂ.ಎಲ್.ಸಿ (ಚುನಾವಣೆ)/ವಿವ-05/2022-23 ದಿನಾಂಕ: 21-05-2022ರಂದು ಸ್ಪಷ್ಟವಾಗಿ ತಿಳಿಸಿದ್ದಾರೆ.

ಆದರೆ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಇತರೆ ಸಂಘಟನೆಗಳಲ್ಲಿನ ಅರ್ಹ ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಲು ಅನುಕೂಲವಾಗುವಂತೆ ಸರಕಾರವು ಹೊರಡಿಸಿದ ಅಧಿಸೂಚನೆ ಸಂಖ್ಯೆ: ಸಿಆಸುಇ:13 ಹೆಚ್‍ಹೆಚ್‍ಎಲ್ 2022 ದಿನಾಂಕ:10-06-2022ರಂದು “ಪದವೀಧರರು ಹಾಗೂ ಶಿಕ್ಷಕರು ಮತದಾನ ಮಾಡಲು ಅನುಕೂಲವಾಗುವಂತೆ ಅಂತಹ ಅರ್ಹ ಮತದಾರರಿಗೆ ಸೀಮಿತವಾದಂತೆ ಮತ ಚಲಾಯಿಸಲು ಮತದಾರರಿಗೆ ದಿನಾಂಕ:13-06-2022 ಸೋಮವಾರದಂದು ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿ ಆದೇಶಿಸಿದೆ” ಎಂದು ಸ್ಪಷ್ಟವಾಗಿ ಆದೇಶಿಸಿದೆ.
ಕರ್ನಾಟಕ ವಾಯುವ್ಯ ಪದವೀಧರ/ಶಿಕ್ಷಕರ ಕ್ಷೇತ್ರ ಹಾಗೂ ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರ ಚುನಾವಣೆಯ ಮತದಾನ ದಿನದಂದು ಮತ ಚಲಾಯಿಸಲು ಅನುಕೂಲವಾಗುವಂತೆ ಸಾರ್ವತ್ರಿಕ ರಜೆ ಘೋಷಿಸುವಂತೆ ಕೋರಿ ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿಗಳಿಗೆ ಪತ್ರ ಬರೆಯಲಾಗಿತ್ತು. ಆದರೆ, ಮತದಾರರಿಗೆ ವಿಶೇಷ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿದೆ ಎಂದು ಕರ್ನಾಟಕ ವಾಯುವ್ಯ ಪದವೀಧರ/ಶಿಕ್ಷಕರ ಕ್ಷೇತ್ರ ಹಾಗೂ ಕರ್ನಾಟಕ ಪಶ್ಚಿಮ ಶಿಕ್ಷಕರ ಮತಕ್ಷೇತ್ರದ ಚುನಾವಣಾಧಿಕಾರಿಗಳೂ ಆಗಿರುವ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಆಮ್ಲಾನ್ ಆದಿತ್ಯ ಬಿಸ್ವಾಸ ತಿಳಿಸಿದ್ದಾರೆ.
ಚುನಾವಣಾ ಆಯೋಗ ಹಾಗೂ ಸರಕಾರದ ಸ್ಪಷ್ಟ ಆದೇಶಗಳಿದ್ದರೂ ಕೂಡಾ ಸಾರ್ವತ್ರಿಕ ರಜೆಯ ಬಗ್ಗೆ ಸ್ಪಷ್ಟೀಕರಣ ಕೇಳಲಾಗುತ್ತಿದೆ. “ಶಿಕ್ಷಣ ಸಂಸ್ಥೆಗಳಿಗೆ ಸಾರ್ವತ್ರಿಕ ರಜೆ ಇಲ್ಲ ಎಂಬುದನ್ನು ಸ್ಪಷ್ಟೀಕರಿಸುವದರೊಂದಿಗೆ ಎಲ್ಲ ಶಿಕ್ಷಕ ಅರ್ಹ ಮತದಾರರು ವಿಶೇಷ ಸಾಂದರ್ಭಿಕ ರಜೆ ಪಡೆದು ತಮ್ಮ ಮತವನ್ನು ಚಲಾಯಿಸಬೇಕು. ಈ ವಿಷಯವಾಗಿ ಯಾವದೇ ಗೊಂದಲವನ್ನುಂಟು ಮಾಡಿಕೊಳ್ಳಬಾರದು.
-ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ಹುಬ್ಬಳ್ಳಿ