Prajapath

ಮುಖ್ಯಾಂಶಗಳು

ನಕಲಿ ಠರಾವ್ ಸೃಷ್ಟಿ, ಪೌರಾಯುಕ್ತರ ಹೆಸರಲ್ಲಿ ಫೋರ್ಜರಿ ಸಹಿ ಆರೋಪ ‘ಮರು ವಿಚಾರಣೆ’ಯಲ್ಲೂ ಸಾಬೀತು- ನಗರಸಭೆಯ ಮೂವರು ಬಿಜೆಪಿ ಸದಸ್ಯರ ಸದಸ್ಯತ್ವ ಎರಡನೇ ಬಾರಿಯೂ ಅನರ್ಹ! ಕಮರಿದ ಬಿಜೆಪಿ ಕನಸು; ಕಾಂಗ್ರೆಸ್‌ಗೆ ಗದ್ದುಗೆ?

Spread the love

 

ಪ್ರಜಾಪಥ ವಾರ್ತೆ

ಗದಗ: ದಿನಕ್ಕೊಂದರಂತೆ ಕುತೂಹಲಕಾರಿ ತಿರುವುಗಳನ್ನು ಪಡೆಯುತ್ತ ಸಾಗಿದ್ದ ಇಲ್ಲಿನ ಗದಗ ಬೆಟಗೇರಿ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಚುನಾವಣೆ ವಿಷಯ ಅಂತಿಮ ಘಟ್ಟ ತಲುಪಿದ್ದು, ಸದ್ಯದ ಪರಿಸ್ಥಿತಿಯಲ್ಲಿ ಗದ್ದುಗೆ ಕಾಂಗ್ರೆಸ್‌ ಪಾಲಾಗುವುದು ನಿಚ್ಚಳವಾಗಿದೆ.

ಗದಗ-ಬೆಟಗೇರಿ ನಗರಸಭೆ ಮಾಲಿಕತ್ವದ 54 ವಕಾರ ಸಾಲುಗಳನ್ನು ಕಾನೂನು ಬಾಹಿರವಾಗಿ ಲೀಜ್ ನೀಡಲು ನಕಲಿ ಠರಾವ್ ಸೃಷ್ಟಿ ಹಾಗೂ ಅದಕ್ಕೆ ಅಂದಿನ ಪೌರಾಯುಕ್ತರ ಹೆಸರಲ್ಲಿ ಫೋರ್ಜರಿ ಸಹಿ ಮಾಡಿದ ಆರೋಪ ಕ್ಕೆ ಸಂಬಂಧಿಸಿದಂತೆ ಅನರ್ಹ ಆದೇಶ ವಿರುದ್ಧ ಹೈಕೋರ್ಟ ಮೊರೆ ಹೋಗಿ ರದ್ದುಗೊಳಿಸಿ, ನ್ಯಾಯಾಲಯದ ಆದೇಶದಂತೆ ಗುರುವಾರ ಸಂಜೆ ಪ್ರಾದೇಶಿಕ ಆಯುಕ್ತರು ನಡೆಸಿದ ‘ಮರು ವಿಚಾರಣೆ’ಯಲ್ಲೂ ಆರೋಪ ಸಾಬೀತಾಗಿದ್ದರಿಂದ ನಗರಸಭೆಯ ಮೂವರು ಬಿಜೆಪಿ ಸದಸ್ಯರ ಸದಸ್ಯತ್ವ ಎರಡನೇ ಬಾರಿಯೂ ಅನರ್ಹಗೊಂಡಿದೆ.

ಹಿಂದಿನ ಅಧ್ಯಕ್ಷೆ, 35 ನೇ ವಾರ್ಡಿನ ಸದಸ್ಯೆ ಉಷಾ ಮಹೇಶ ದಾಸರ, 28 ನೇ ವಾರ್ಡಿನ ಸದಸ್ಯ ಅನೀಲ ಅಬ್ಬಿಗೇರಿ ಹಾಗೂ 13ನೇ ವಾರ್ಡಿನ ಸದಸ್ಯ ಗೂಳಪ್ಪ ಮುಶಿಗೇರಿ ಅವರ ಸದಸ್ಯತ್ವ ಅನರ್ಹಗೊಳಿಸಿ ಬೆಳಗಾವಿ ಪ್ರಾದೇಶಿಕ ಆಯುಕ್ತ ಎಸ್.ಬಿ. ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.

ಏನಿದು ಪ್ರಕರಣ..?: ಇಲ್ಲಿನ ಗದಗ-ಬೆಟಗೇರಿ ನಗರಸಭೆ ಮಾಲೀಕತ್ವದ 54 ವಕಾರ ಸಾಲು ಆಸ್ತಿಯನ್ನು ಲೀಜ್ ಅವಧಿ ಪೂರ್ಣಗೊಂಡ ಹಿನ್ನಲೆಯಲ್ಲಿ ವಶಪಡಿಸಿಕೊಳ್ಳಲಾಗಿತ್ತು.

ಬಳಿಕ 2021 ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಆಡಳಿತ ಚುಕ್ಕಾಣಿ ಹಿಡಿದು, ಉಷಾ ದಾಸರ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಬಳಿಕ 2023ರ ಅಕ್ಟೋಬರ್ 25 ರಿಂದ 2024ರ ಜುಲೈ 22ರ ನಡುವಿನ ಅವಧಿಯಲ್ಲಿ ಗದಗ-ಬೆಟಗೇರಿ ಮಾಲೀಕತ್ವದ ಸಾವಿರಾರು ಕೋಟಿ ರೂ. ಮೌಲ್ಯದ 54 ವಕಾರ ಸಾಲುಗಳನ್ನು ಕಾನೂನು ಬಾಹಿರವಾಗಿ ದೀರ್ಘ ಅವಧಿಗೆ ಒಪ್ಪಂದ ಮಾಡಿಕೊಂಡು ಸುಳ್ಳು ಠರಾವು ಸೃಷ್ಟಿಸಿದ ಆರೋಪದಡಿ ನಗರಸಭೆ ಮಾಜಿ ಪ್ರಭಾರ ಪೌರಾಯಕ್ತ ಪ್ರಶಾಂತ ವರಗಪ್ಪನವರ ಅವರು 2024ರ ಆ. 15 ರಂದು ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

2024ರ ಫೆಬ್ರವರಿ 9ರಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಠರಾವು ಪಾಸಾಗಿದೆ ಎಂದು ನಕಲಿ ಠರಾವು ಸೃಷ್ಟಿಸಿ 2024ರ ಜುಲೈ 22ರಂದು ವಕಾರಸಾಲಿನ ಎಲ್ಲ ಅನುಭೋಗದಾರರಿಗೆ ಕಬ್ಜಾ ನೀಡಲಾಗಿದೆ ಎಂದು ನಕಲಿ ಪತ್ರವನ್ನು ಸೃಷ್ಟಿಸಿ ಎರಡೂ ದಾಖಲೆಗಳಿಗೆ ಪಿರ್ಯಾದಿದಾರರ ನಕಲಿ ಸಹಿಯನ್ನು ಮಾಡಿ ಗದಗ-ಬೆಟಗೇರಿ ನಗರಸಭೆಗೆ ಹಾಗೂ ಸರಕಾರಕ್ಕೆ ಮೋಸ ಮಾಡಿದ ಆರೋಪದಡಿ ದೂರು ದಾಖಲಾಗಿತ್ತು.

ಈ ಕುರಿತು ತನಿಖೆ ನಡೆಸಿದ್ದ ಪೊಲೀಸರು  ಹಿಂದಿನ ಅಧ್ಯಕ್ಷೆ ಉಷಾ ದಾಸರ, ಸದಸ್ಯರಾದ ಅನಿಲ್ ಅಬ್ಬಿಗೇರಿ ಹಾಗೂ ಗೂಳಪ್ಪ ಮುಶಿಗೇರಿ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಇತ್ತ, ಇದೇ ವಿಷಯಕ್ಕೆ ಸಂಬAಧ ಪಟ್ಟಂತೆ ಈ ಮೂವರಿಗೆ ಬೆಳಗಾವಿಯ ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟೆಣ್ಣವರ ಜ.31 ರಂದು ಕಾರಣ ಕೇಳಿ ನೋಟಿಸ್ ಕೊಟ್ಟಿದ್ದರು. ಮತ್ತೇ ಫೆ.7ರಂದು ಆರೋಪ ಎದುರಿಸುತ್ತಿದ್ದ ಸದಸ್ಯರಿಗೆ ಪ್ರಾದೇಶಿಕ ಆಯುಕ್ತ ಎಸ್.ಬಿ. ಶೆಟ್ಟೆಣ್ಣವರ ಅವರು ನೋಟಿಸ್ ಜಾರಿ ಮಾಡಿ ಫೆ.13ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಸೂಚಿಸಿದ್ದರು. ಫೆ.13 ರಂದು ವಿಚಾರಣೆ ನಡೆಸಿ, ಆದೇಶ ಕಾಯ್ದಿರಿಸಿದ್ದರು. ಶನಿವಾರ (ಫೆ.16) ಮಧ್ಯಾಹ್ನ ಈ ಕುರಿತ ಆದೇಶ ಹೊರಬಿದ್ದಿತ್ತು.

ಈ ಆದೇಶ ವಿರುದ್ಧ ಮತ್ತೆ ಹೈಕೋರ್ಟ್ ಗೆ ತೆರಳಿದ್ದ ‘ಅನರ್ಹ’ ಸದಸ್ಯರು ಕೆಲ ದಿನಗಳ ಕಾಲ ‘ಪ್ರಾದೇಶಿಕ ಆಯುಕ್ತರ’ ಆದೇಶ ರದ್ದುಗೊಳಿಸಲು ಯಶಸ್ವಿಯಾಗಿದ್ದರು. ಆದರೆ, ಅದೇ ನ್ಯಾಯಾಲಯವು ಪ್ರಾದೇಶಿಕ ಆಯುಕ್ತರು ಮತ್ತೊಮ್ಮೆ ವಿಚಾರಣೆ ನಡೆಸುವಂತೆ ಸೂಚಿಸಿದ್ದರಿಂದ ಅದರನ್ವಯ ಗುರುವಾರ ವಿಚಾರಣೆ ನಡೆದು, ಆದೇಶ ಹೊರಬಿದ್ದಿದೆ.

ಆದೇಶದಲ್ಲಿ ಏನಿದೆ?:

ನಗರಸಭೆ ಸದಸ್ಯರಾಗಿದ್ದ ಉಷಾ ದಾಸರ, ಅನಿಲ್‌ ಅಬ್ಬಿಗೇರಿ ಹಾಗೂ ಗೂಳಪ್ಪ ಮುಶಿಗೇರಿ ಅವರ ವಿರುದ್ಧ ನಕಲಿ ಠರಾವು ಸೃಷ್ಟಿ ಮತ್ತು ಸಹಿ ಫೋರ್ಜರಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಾಗಿದೆ. ಜತೆಗೆ ಪೊಲೀಸರು ಗದಗ ಜೆಎಂಎಫ್‌ಸಿ 1ನೇ ಕೋರ್ಟ್‌ನಲ್ಲಿ ಆರೋಪ ಪಟ್ಟಿ ಕೂಡ ಸಲ್ಲಿಸಿದ್ದಾರೆ. ಆರೋಪಿಗಳ ವಿರುದ್ಧ ಕ್ರಿಮಿನಲ್‌ ಪ್ರೊಸೀಡಿಂಗ್ಸ್‌ ಕೂಡ ಆರಂಭಗೊಂಡಿದೆ. ವಸ್ತುಸ್ಥಿತಿ ಹೀಗಿರುವಾಗ ಆಪಾದಿತರ ವಿರುದ್ಧ ಮಾಡಲಾಗಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿರುತ್ತವೆ. ಆದಕಾರಣ, ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಕಲಂ 41(1), (2)ರಂತೆ ಮೂವರು ಸದಸ್ಯರನ್ನು ಸದಸ್ಯತ್ವದಿಂದ ತೆಗೆದುಹಾಕಿ ಆದೇಶಿಸಲಾಗಿದೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಎಸ್‌.ಬಿ. ಶೆಟ್ಟೆಣ್ಣವರ ಆದೇಶದಲ್ಲಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

Most Popular

To Top
error: Content is protected !!