ಕೊಲೆ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ

Spread the love

ಗದಗನ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ

 

ಪ್ರಜಾಪಥ ವಾರ್ತೆ

ಗದಗ: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನಿಗೆ ಗದಗನ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷ ಕಠಿಣ ಶಿಕ್ಷೆ ವಿಧಿಸಿದೆ. ಹನುಮಂತಪ್ಪ ದುರಗಪ್ಪ ಬಂಡಿವಡ್ಡರ ಶಿಕ್ಷೆಗೊಳಗಾದ ಆರೋಪಿ.

ಪ್ರಕರಣ ವಿವರ: 2015 ರ ಅ.2 ರಂದು ರಾತ್ರಿ 11-30 ಗಂಟೆಗೆ ಗದಗ ಗ್ರಾಮೀಣ ಠಾಣೆ ವ್ಯಾಪ್ತಿಯ ಹರ್ತಿಯಲ್ಲಿ ಲಕ್ಷ್ಮವ್ವ ಎಂಬುವವಳ ಕುತ್ತಿಗೆಗೆ ಹಗ್ಗದಿಂದ ಉರಳು ಹಾಕಿ ಕೊಲೆ ಮಾಡಲು ಪ್ರಯತ್ನಿಸಿದ್ದ. ಮತ್ತೊಂದೆಡೆ ಲಕ್ಷ್ಮವ್ವಳು ಉಪಚಾರ ಫಲಿಸದೇ  2015ರ ಅ. 24 ರಂದು ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.

ಅಲ್ಲದೇ ಈ ಕುರಿತು ಸಾಕ್ಷಾಧಾರಗಳನ್ನು ನಾಶಪಡಿಸುವ ಉದ್ದೇಶದಿಂದ ಕೊಲೆ ಮಾಡಲು ಉಪಯೋಗಿಸಿದ ಹಗ್ಗವನ್ನು ಹರ್ತಿ ಗ್ರಾಮದ ಜನರು ಬಯಲು ಕಡೆಗೆ ಹೋಗಿವ ಗಾಂವಠಾಣಾ ಜಾಗೆಯ ಹಾಳುಭಾವಿಯ ಹತ್ತಿರ ಕಂಟಿಯಲ್ಲಿ ಒಗೆದಿದ್ದನು.

ಆರೋಪಿತನ ವಿರುದ್ಧ  ಅಂದಿನ ಗದಗ ಗ್ರಾಮೀಣ ವೃತ್ತದ ವೃತ್ತ ಆರಕ್ಷಕ ಅಧೀಕ್ಷಕರಾಗಿದ್ದ ಸೋಮಶೇಖರ ಜಿ. ಜುಟ್ಟಲ್ ಅವರು ತನಿಖೆಯನ್ನು ಪೂರೈಸಿ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಸಾಕ್ಷಿ ವಿಚಾರಣೆ ನಡೆಸಿದ ಗದಗಿನ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ  ರಾಜೇಶ್ವರ ಎಸ್. ಶೆಟ್ಟಿ ಅವರು, ಈ ಪ್ರಕರಣದಲ್ಲಿ ಆರೋಪ ರುಜುವಾತು ಆಗಿದ್ದರಿಂದ  ಆರೋಪಿತನಾದ  ಹನುಮಂತಪ್ಪ ದುರಗಪ್ಪ ಬಂಡಿವಡ್ಡರ ಅವನಿಗೆ ಭಾ.ದಂ.ಸಂಹಿತೆ ಕಲಂ: 304(2) ಭಾದಂಸಂ ರಡಿ 10 ವರ್ಷ ಕಠಿಣ ಶಿಕ್ಷೆ  ಹಾಗೂ  10,000 ರೂ. ದಂಡ  ದಂಡ ತುಂಬುವಂತೆ ಆ.3 ರಂದು ಆದೇಶ ನೀಡಿದ್ದಾರೆ.

ಅಲ್ಲದೇ, ದಂಡ ತುಂಬಲು ತಪ್ಪಿದಲ್ಲಿ ಮತ್ತೆ 6 ತಿಂಗಳ ಸಾದಾ ಸಜೆ ಮತ್ತು 201 ಭಾರತೀಯ ದಂಡ ಸಂಹಿತೆ ರಡಿ 1 ವರ್ಷ ಸಾದಾ ಶಿಕ್ಷೆ ಹಾಗೂ  2,000 ರೂ. ದಂಡ, ದಂಡ ತುಂಬಲು ತಪ್ಪಿದಲ್ಲಿ 1 ತಿಂಗಳ ಸಾದಾ ಸಜೆ ವಿಧಿಸಿ ತೀರ್ಪು ನೀಡಿರುತ್ತಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕಿ ಶ್ರೀಮತಿ ಸವಿತಾ ಎಂ ಶಿಗ್ಲಿ ಅವರು  ಸಾಕ್ಷಿ ವಿಚಾರಣೆ ಮಾಡಿಸಿದ್ದು, ಸರ್ಕಾರಿ ಅಭಿಯೋಜಕ ಮಲ್ಲಿಕಾರ್ಜುನಗೌಡ ಬಸವನಗೌಡ ದೊಡ್ಡಗೌಡ್ರ ಅವರು ವಾದವನ್ನು ಮಂಡಿಸಿರುತ್ತಾರೆ.

Leave a Reply

Your email address will not be published. Required fields are marked *