ಮಲ್ಲಸಮುದ್ರದಲ್ಲಿ ನಾಲ್ವರು ಯುವಕರ ಮಧ್ಯೆ ಹೊಡೆದಾಟ-ಓರ್ವಿನಗೆ ಚಾಕು ಇರಿತ -ಸ್ಥಿತಿ ಗಂಭೀರ
ಗ್ರಾಮದಲ್ಲಿ ಎಸ್ ಪಿ ನೇತೃತ್ವದಲ್ಲಿ ಪೊಲೀಸರ ಠಿಕಾಣಿ-ಇಬ್ಬರ ಬಂಧನ
ಪ್ರಜಾಪಥ ವಾರ್ತೆ
ಗದಗ: ಕ್ಷುಲ್ಲಕ ಕಾರಣಕ್ಕೆ ನಾಲ್ವರು ಯುವಕರ ಮಧ್ಯೆ ಹೊಡೆದಾಟ ನಡೆದು, ಘಟನೆಯಲ್ಲಿ ಓರ್ವನ ಸ್ಥಿತಿ ಗಂಭೀರವಾಗಿರುವ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಮಲ್ಲಸಮುದ್ರದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಗಾಯಾಳು ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಗ್ರಾಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ನೇತೃತ್ವದಲ್ಲಿ ಬೀಡು ಬಿಟ್ಟಿದ್ದಾರೆ.
ಘಟನೆ ವಿವರ: ಮೊಹರಂ ಕೊನೆ ದಿನವಾದ ಮಂಗಳವಾರ ಸಂಜೆ ಮಲ್ಲಸಮುದ್ರ ಗ್ರಾಮದ ಮುಸ್ತಫಾ ಹೊಸಮನಿ ಹಾಗೂ ತೌಶಿಫ್ ಹೊಸಮನಿ ಮತ್ತು ಸೋಮು ಗುಡಿ ಹಾಗೂ ಯಲ್ಲಪ್ಪ ಅವರ ಮಧ್ಯೆ ‘ಕಾಲು ತುಳಿದ’ ’ ಕಾರಣಕ್ಕೆ ವಾಗ್ವಾದ ನಡೆದಿದೆ.
ಈ ವೇಳೆ ಸೋಮು ಎಂಬುವವರು ತೌಶಿಫ್ ಎಂಬುವವರಿಗೆ ಚಾಕು ಇರಿದಿದ್ದರಿಂದ ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಇದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ನಾಲ್ವರು ಯುವಕರ ಮಧ್ಯೆ ವೈಯಕ್ತಿಕ ಕಾರಣಕ್ಕೆ ಈ ಘಟನೆ ನಡೆದಿದೆ. ತೌಶಿಫ್ ಎಂಬುವವರ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಜಿಮ್ಸ್ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಲಿದ್ದಾರೆ.
ಅಲ್ಲದೇ, ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು ಅವರು ‘ಪ್ರಜಾಪಥ’ಕ್ಕೆ ತಿಳಿಸಿದ್ದಾರೆ.