ಹುಯಿಲಗೋಳ, ಬಳಗಾನೂರ, ಶಿರೋಳದಲ್ಲಿ ಗೆದ್ದವರಾರು? ಯಾರಿಗೆ ಎಷ್ಟು ಮತ?

Spread the love

ತೆರವಾಗಿದ್ದ ಗ್ರಾಮ ಪಂಚಾಯತ್ ಸ್ಥಾನಗಳ ಚುನಾವಣೆ ಫಲಿತಾಂಶ ಪ್ರಕಟ

 

ಪ್ರಜಾಪಥ ವಾರ್ತೆ

ಗದಗ: ತಾಲ್ಲೂಕಿನ ಹುಯಿಲಗೋಳ ಗ್ರಾಮ ಪಂಚಾಯತ್‌ನ ಮೂರನೇ ವಾರ್ಡ್ಗೆ ನಡೆದ ಉಪಚುನಾವಣೆಯಲ್ಲಿ ಟೀಪುಸುಲ್ತಾನ ಫಕ್ರುಸಾಬ ನದಾಫ ಅವರು 180 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.

ಕಳೆದ ಅ.28 ರಂದು ಶುಕ್ರವಾರ ನಡೆದಿದ್ದ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದೆ. ಹಿಂದುಳಿದ ‘ಅ’ ವರ್ಗಕ್ಕೆ ಮೀಸಲಿದ್ದ ಸ್ಥಾನಕ್ಕೆ ಸ್ಪರ್ಧಿಸಿದ್ದ ಕಾಂಗ್ರೆಸ್ ಬೆಂಬಲಿತ ಟೀಪುಸಾಬ ಫಕ್ರುಸಾಬ ನದಾಫ ಅವರು ವಿಜಯದ ನಗೆ ಬೀರಿದ್ದಾರೆ.

ಗೆಲುವು ಸಾಧಿಸಿರುವ ಟೀಪುಸುಲ್ತಾನ ಫಕ್ರುಸಾಬ ನದಾಫ ಅವರು 348 ಮತಗಳನ್ನು ಪಡೆದರೆ, ಕಣದಲ್ಲಿದ್ದ ಅಬ್ದುಲ್‌ಸಾಬ ಬಡೇಸಾಬ ನದಾಫ 168, ಬಸವರಾಜ ಭೀಮಪ್ಪ ಹಡಗಲಿ 96 ಮತಗಳನ್ನು ಪಡೆದಿದ್ದಾರೆ. 25 ಮತಗಳು ತಿರಸ್ಕೃತಗೊಂಡಿವೆ. 637 ಮತಗಳು ಚಲಾವಣೆಗೊಂಡಿದ್ದವು.

ಸಂಭ್ರಮಾಚರಣೆ: ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದಂತೆ ಗೆದ್ದ ಅಭ್ಯರ್ಥಿಯ ಪರ ತಹಶೀಲ್ದಾರ ಕಚೇರಿ ಹೊರಗಡೆ ಸಿಹಿ ಹಂಚಿ, ಬಣ್ಣ ಎರಚಿಕೊಂಡು ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ನರಗುಂದ ವಿಧಾನಸಭೆ ಮತಕ್ಷೇತ್ರದ ಬೂತ್ ಮಟ್ಟದ ಅಧ್ಯಕ್ಷ ಶರೀಫಸಾಹೇಬ ಸೊರಟೂರ, ಗ್ರಾಪಂ ಸದಸ್ಯರಾದ ರಮೇಶ ಬೆಳಗಟ್ಟಿ, ಮಿಲಿಂದ ಕಾಳೆ, ಮಹೇಶಗೌಡ ಪಾಟೀಲ, ಮುಖಂಡರಾದ ಸಂಗಪ್ಪ ಮಾರನಬಸರಿ, ಲಕ್ಷ್ಮಣ ಕಡಿಯವರ, ಶರಣಪ್ಪ ಹುಯಿಲಗೋಳ, ನಾಗರಾಜ ಕಾಳೆ, ಕಲ್ಲಪ್ಪ ಹಡಪದ, ಎಸ್‌ಡಿಎಂಸಿ ಅಧ್ಯಕ್ಷ ನೇಸರ ಬೆಳಗಟ್ಟಿ, ದಾವಲಸಾಬ ನದಾಫ, ಮಾರುತಿ ಕಾಳೆ, ಮಂಜುನಾಥ ಡೋಣಿ, ಬಸವರಾಜ ಹರಿಜನ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಇದ್ದರು.

ಉಳಿದಂತೆ ಗದಗ ತಾಲ್ಲೂಕಿನ ಬಳಗಾನೂರ ಗ್ರಾಮ ಪಂಚಾಯತ್‌ನ 2 ನೇ ವಾರ್ಡ್ನ ಉಪಚುನಾವಣೆಯಲ್ಲಿ ಚನ್ನಯ್ಯ ಶಾಂತಯ್ಯನಮಠ ಅವರು 383 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ಉಳಿದಂತೆ ಕಣದಲ್ಲಿದ್ದ ಶೇಖಪ್ಪ ಹನಮಪ್ಪ ಅಗಸಿಮನಿ ಅವರು 327 ಮತಗಳನ್ನು ಪಡೆದು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಲಕ್ಷ್ಮಿ ವಿರುಪಾಕ್ಷಪ್ಪ ಹಿತ್ತಲಮನಿ ಅವರು 16 ಮತಗಳನ್ನು ಪಡೆದಿದ್ದಾರೆ. 14 ಮತಗಳು ತಿರಸ್ಕೃತಗೊಂಡಿವೆ. 726 ಮತಗಳು ಚಲಾವಣೆಗೊಂಡಿದ್ದವು.

ಗದಗ ತಾಲ್ಲೂಕಿನ ಯಲಿಶಿರೂರ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಿರೋಳ ಚುನಾವಣಾ ಕ್ಷೇತ್ರದ ಚುನಾವಣೆಯಲ್ಲಿ ಚನ್ನಬಸವ್ವ ದಂಡಿನ ಅವರು 256 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಶಾಂತವ್ವ ಮೀಸಿ 136 ಮತಗಳನ್ನು ಪಡೆದಿದ್ದಾರೆ. 5 ಮತಗಳು ತಿರಸ್ಕೃತಗೊಂಡಿವೆ. 397 ಮತಗಳು ಚಲಾವಣೆಗೊಂಡಿದ್ದವು.

Leave a Reply

Your email address will not be published. Required fields are marked *