ತಿಂಗಳಿಂದ ಕುಡಿಯುವ ನೀರು ಬಂದಿಲ್ವಂತೆ- ಗದಗ-ಬೆಟಗೇರಿಯ ಯಾವ ಏರಿಯಾದವರ ಪ್ರತಿಭಟನೆ
ಪ್ರಜಾಪಥ ವಾರ್ತೆ
ಗದಗ: ಬೇಸಿಗೆ ಆರಂಭದಲ್ಲೇ ಅವಳಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆಯೂ ಕಾಡಲಾರಂಭಿಸಿದೆ. ಕಳೆದ ಒಂದು ತಿಂಗಳಿಂದ ಲೂ ಕುಡಿಯುವ ನೀರು ಪೂರೈಕೆ ಯಾಗಿಲ್ಲ ಎಂದು ಆರೋಪಿಸಿ ಖಾಲಿ ಕೊಡಗಳೊಂದಿಗೆ ನಗರಸಭೆ ಆವರಣದಲ್ಲಿ ಪ್ರತಿಭಟಿಸಿದ ಘಟನೆ ಶುಕ್ರವಾರ ನಡೆದಿದೆ.
ಬೆಟಗೇರಿ ಭಾಗದ ಐದನೇ ವಾರ್ಡ್ ವ್ಯಾಪ್ತಿಯ ಗಣೇಶ ನಗರ ಸೇರಿ ವಿವಿಧ ಪ್ರದೇಶದ ಮಹಿಳೆಯರು ಖಾಲಿಕೊಡ ಗಳೊಂದಿಗೆ ಆಗಮಿಸಿ, ನಗರಸಭೆ ಅಧಿಕಾರಿ ಗಳಿಗೆ ಬಿಸಿ ಮುಟ್ಟಿಸಿದರು.
ನಮ್ಮ ಭಾಗಕ್ಕೆ 20 ವರ್ಷಗಳಾದರೂ ಮೂಲಸೌಕರ್ಯಗಳಿಲ್ಲ. ಕುಡಿಯುವ ನೀರಿನ ಸಮರ್ಪಕ ಪೂರೈಕೆ ಕನಸಿನ ಮಾತಾಗಿದೆ. ರಸ್ತೆಯಲ್ಲಿ ಎಲ್ಲೆಂದರಲ್ಲಿ ನೀರಿನ ಪೈಪು ಒಡೆದು ರಸ್ತೆಗೆ ನೀರು ಪೋಲಾಗುತ್ತಿದ್ದರೂ ನಮಗೆ ಮಾತ್ರ ನೀರು ಪೂರೈಕೆಯಾಗುತ್ತಿಲ್ಲ ಎಂದು ಕಿಡಿಕಾರಿದರು.
ಇರುವ ಎರಡು ಬೋರ್ವೆಲ್ ಸಹ ದುರಸ್ತಿಗೆ ಬಂದಿವೆ. 15 ದಿನಕ್ಕೊಮ್ಮೆ ನೀರು ಬಂದರೂ ಕೆಲವರಿಗೆ ಸಿಗುತ್ತದೆ, ಮತ್ತೆ ಕೆಲವರಿಗೆ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ನಗರಾಡಳಿತ ವಿರುದ್ಧ ಘೋಷಣೆ ಕೂಗಿದರು.
ವಾಗ್ವಾದ: ಈ ವೇಳೆ ಗಣೇಶನಗರ ನಿವಾಸಿಗಳು ನಗರಸಭೆ ಪೌರಾಯುಕ್ತರೊಂದಿಗೆ ವಾಗ್ವಾದ ನಡೆಸಿದರು.
ಏಳು ದಿನಗಳ ಒಳಗಾಗಿ ಸಮರ್ಪಕ ನೀರು ಪೂರೈಕೆ, ಮೂಲ ಸೌಕರ್ಯ ಒದಗಿಸದಿದ್ದರೆ ನಗರಸಭೆಗೆ ಮುತ್ತಿಗೆ ಹಾಕುತ್ತೇವೆ,
-ಗಣೇಶ ನಗರ ನಿವಾಸಿಗಳು
ಅವಳಿ ನಗರದಲ್ಲಿ ನೀರಿನ ಸಮಸ್ಯೆ ಯಾಗದಂತೆ ಕ್ರಮ ಕೈಗೊಳ್ಳುತ್ತೇವೆ.
ನೀರು ಸರಬರಾಜು ವ್ಯವಸ್ಥೆಯಲ್ಲಿ ಉಂಟಾಗುತ್ತಿರುವ ಸಮಸ್ಯೆ ಬಗ್ಗೆ ಅಧ್ಯಕ್ಷರೊಂದಿಗೆ ಮತ್ತು ಅಧಿಕಾರಿಗಳ ಜೊತೆ ಚರ್ಚಿಸಿದ್ದೇವೆ. ತಾಂತ್ರಿಕ ತೊಂದರೆಗೆ ಪರಿಹಾರ ಕಂಡು ಹಿಡಿದು, ನೀರಿನ ಸಮಸ್ಯೆ ಮರುಕಳಿಸದಂತೆ ಮಾಡುತ್ತೇವೆ.
-ರಮೇಶ ಸುಣಗಾರ, ಪೌರಾಯುಕ್ತ