ಶಿವಮೊಗ್ಗ ಜಿಲ್ಲೆಯಲ್ಲಿ ಗದಗ ಜಿಲ್ಲೆಯ ಮೆಸ್ಕಾಂ ನೌಕರ ಸಾವು-ಇದಕ್ಕೆ ಕಾರಣವೇನು?
ಪ್ರಜಾಪಥ ವಾರ್ತೆ
ಶಿವಮೊಗ್ಗ/ಗದಗ: ಟ್ರಾನ್ಸ್ ಫಾರ್ಮರ ದುರಸ್ತಿ ಕಾರ್ಯದಲ್ಲಿ ನಿರತವಾಗಿದ್ದ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ, ಲೈನ್ ಮ್ಯಾನ್ ಸಾವನ್ನಪ್ಪಿರುವ ಘಟನೆ ಶುಕ್ರವಾರ ಮಧ್ಯಾಹ್ನ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಉಳವಿ ಸಮೀಪದ ದೂಗೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಭದ್ರಾಪುರದಲ್ಲಿ ನಡೆದಿದೆ.
ಮೃತ ಮೆಸ್ಕಾಂ ನೌಕರಸ್ಥ ರವಿ ಪೀರಪ್ಪ ಚವ್ಹಾಣ(31) ಎಂದು ಗುರುತಿಸಲಾಗಿದೆ. ಮೃತನು ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ರಾಜೂರ ಗ್ರಾಮದವನು. ಕೆಲವೇ ವರ್ಷಗಳ ಹಿಂದೆ ಮೆಸ್ಕಾಂ ನಲ್ಲಿ ಲೈನ್ʼಮ್ಯಾನ್ ಆಗಿ ಸೇವೆಗೆ ಸೇರಿಕೊಂಡಿದ್ದನು. ಶುಕ್ರವಾರ ಟ್ರಾನ್ಸ್ ಫಾರ್ಮರ್ ಕೈಕೊಟ್ಟ ಕಾರಣದಿಂದ ಉಂಟಾದ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸುವಲ್ಲಿ ನಿರತರಾಗಿದ್ದರು. ಈ ವೇಳೆ 11 ಕೆವಿ ಮಾರ್ಗದ ವಿದ್ಯುತ್ ಶಾಕ್ ಹೊಡೆದಿದೆ. ಮೇಲಿಂದ ಕೆಳಗೆ ನೆಲಕ್ಕೆ ಬಿದ್ದ ಅವರನ್ನು ಕೂಡಲೇ ಸಾಗರ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೇ ಮಾರ್ಗ ಮಧ್ಯೆ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಈ ಅವಘಡಕ್ಕೆ ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬುದು ಕುಟುಂಬಸ್ಥರ ಆರೋಪವಾಗಿದೆ.
ಮೃತರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ತಾಯಿ, ಪತ್ನಿ, ಮಕ್ಕಳ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.