ಟ್ಯಾಂಕರ್ ಮೂಲಕ ತಕ್ಷಣ ನೀರು ಪೂರೈಕೆ ಆರಂಭಿಸಿ, ಕುಡಿಯುವ ನೀರಿನ ಸಮಸ್ಯೆ: ಅಧಿಕಾರಿಗಳ ಜೊತೆ ಶಾಸಕ ಎಚ್.ಕೆ. ಪಾಟೀಲ ಸಭೆ
ಪ್ರಜಾಪಥ ವಾರ್ತೆ
ಗದಗ: ಅವಳಿ ನಗರದಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಸಂಬAಧಿಸಿದAತೆ ತುರ್ತು ಕ್ರಮ ಕೈಗೊಳ್ಳಬೇಕು. ತಕ್ಷಣವೇ 20 ಟ್ಯಾಂಕರ್ ಬಳಸಿಕೊಂಡು ನೀರು ಪೂರೈಸುವಂತೆ ಸ್ಥಳೀಯ ಶಾಸಕ ಎಚ್.ಕೆ. ಪಾಟೀಲ ಸೂಚಿಸಿದರು.
ರವಿವಾರ ಸಂಜೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಗರಸಭೆ ಕಾಂಗ್ರೆಸ್ ಸದಸ್ಯರೊಂದಿಗೆ ಜಿಲ್ಲಾಧಿಕಾರಿ ಎಂ.ಸುAದರೇಶಬಾಬು, ನಗರಸಭೆ ಪೌರಾಯುಕ್ತರು, ನಿರಂತರ ನೀರು ಪೂರೈಕೆ ಗುತ್ತಿಗೆದಾರರು, ಕೆಯುಐಡಿಎಫ್ಸಿ ಅಧಿಕಾರಿಗಳ ಜೊತೆಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
ಸ್ಥಗಿತಗೊಂಡಿರುವ ವಾಲ್ಮನ್ಗಳ ವೇತನ ಪಾವತಿಗೆ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು, ಅವಳಿ ನಗರದ ನೀರು ಸರಬರಾಜು ಪೈಪ್ ಗಳ ಸೋರಿಕೆ ಪಟ್ಟಿಯನ್ನು ನಗರಸಭೆ ಅಧಿಕಾರಿಗಳು ಮಾಡಿ, ಅದನ್ನು ನಿರಂತರ ನೀರು ವಿಭಾಗಕ್ಕೆ ನೀಡಬೇಕು, ಅವಳಿ ನಗರದಲ್ಲಿ ದುರಸ್ತಿಗೆ ಇರುವ ಕೊಳವೆ ಬಾವಿಗಳ ರಿಪೇರಿಗೆ ಟಾಸ್ಕ್ ಫೋರ್ಸ್ ಸಮಿತಿಯಿಂದ ತಕ್ಷಣಕ್ಕೆ 5 ಲಕ್ಷ ರೂ. ಬಿಡುಗಡೆಯಾಗಲಿದೆ. ಅಗತ್ಯ ಬಿದ್ದರೆ ಹೆಚ್ಚಿನ ಹಣವನ್ನು ನನ್ನ ಅನುದಾನ ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯ ಆರಂಭದಲ್ಲೇ ಶಾಸಕ ಎಚ್.ಕೆ. ಪಾಟೀಲ ಅವರು 24×7 ಯೋಜನೆಯ ಗುತ್ತಿಗೆದಾರ ಷಡಕ್ಷರಿ ಎಂಬುವವರ ವಿರುದ್ಧ ಆರೋಪಗಳ ಪಟ್ಟಿಯನ್ನೇ ತೆರೆದಿಟ್ಟರು. ಈ ವೇಳೆ ಸಭೆಯಲ್ಲಿದ್ದ ನಗರಸಭೆ ಸದಸ್ಯರು, 15-20 ದಿನಗಳಿಂದ ನೀರು ಬಿಟ್ಟಿಲ್ಲ. ಬಿಟ್ಟರೂ ಮಧ್ಯರಾತ್ರಿ ನೀರು ಬಿಡುತ್ತಾರೆ. ಬೆಳಿಗ್ಗೆ 6 ಗಂಟೆಗೆ ಬಂದ್ ಮಾಡುತ್ತಾರೆ. ನೀರಿಗಾಗಿಯೇ ಹಾಗರಣೆ ಮಾಡುವಂತಾಗಿದೆ ಎಂದು ಕಿಡಿಕಾರಿದರು. 27, 29 ಸೇರಿ ಕೆಲ ವಾರ್ಡ್ಗಳಲ್ಲಿ ಓವರ್ ಹೆಡ್ ಟ್ಯಾಂಕ್, ಪೈಪ್ ಸೇರಿ ವಿವಿಧ ರೂಪದಲ್ಲಿ ಪೋಲಾಗುವ ನೀರು ಮತ್ತೆರಡು ವಾರ್ಡ್ಗಳಿಗೆ ನೀರು ಸಾಕಾಗುವಷ್ಟು ಇರುತ್ತದೆ. ಈ ಬಗ್ಗೆ ಎಷ್ಟೇ ಹೇಳಿದರೂ 24×7 ಯೋಜನೆಯ ಗುತ್ತಿಗೆದಾರರು ಸಹಕರಿಸುತ್ತಿಲ್ಲ ಎಂದು ದೂರಿದರು.
ಈ ವೇಳೆ 24×7 ಯೋಜನೆಯ ಗುತ್ತಿಗೆ ಕಂಪನಿ ಪರ ಷಡಕ್ಷರಿ ಎಂಬುವವರು, ನಾವೀಗ ನಗರಸಭೆ ಸದಸ್ಯರ ಬೇಡಿಕೆಯಂತೆ ಐದು ಕಿ.ಮೀ. ನಷ್ಟು ಹೆಚ್ಚುವರಿ ನೀರಿನ ಸರಬರಾಜು ಲೈನ್ ಮಾಡಿದ್ದು, ಹಣ ಪಾವತಿಯಾಗಿಲ್ಲ ಎಂದು ಹೇಳಿದರು.
ಇದರಿಂದ ಗರಂ ಆದ ಶಾಸಕ ಎಚ್.ಕೆ. ಪಾಟೀಲರು, ನೂರಾರು ಮೀಟರ್ ಉದ್ದ ಲೈನ್ ಮಾಡಿರಬಹುದು. ಆದರೆ, ನಗರಸಭೆ ಸದಸ್ಯರು ಬಂದಿದ್ದೇ ಈಚೆಗೆ. ಇದು ಹೇಗೆ ಸಾಧ್ಯ? ಮೊದಲು ಸುಳ್ಳು ಹೇಳುವುದನ್ನು ಬಿಟ್ಟು, ಜನತೆಗೆ ನೀರು ಪೂರೈಕೆಯತ್ತ ಗಮನ ಹರಿಸುವಂತೆ ಎಚ್ಚರಿಸಿದರು.
ಜಿಲ್ಲಾಧಿಕಾರಿ ಎಂ.ಸುಂದರೇಶಬಾಬು ಅವರು, ಒಂಭತ್ತು ಝೋನ್ಗಳ ಪೈಕಿ 7 ಝೋನ್ಗಳಲ್ಲಿ ವಾಲ್ವ್ ಕೂಡಿಸುವುದು ಸೇರಿ ಎಲ್ಲ ಕೆಲಸಗಳು ಮಾ.31 ರೊಳಗೆ ಮುಗಿಯಬೇಕು. ಕಾಮಗಾರಿ ಮುಗಿದ ಝೋನ್ಗಳ ಮೂಲಕ ನೀರು ಪೂರೈಕೆ ಮಾಡಬೇಕು ಎಂದು 24×7 ಯೋಜನೆಯ ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.
24×7 ಯೋಜನೆಯ ವಿಶ್ವೇಶ್ವರಯ್ಯ ಅವರು ನಮ್ಮ ಕೆಲ ವಾಲ್ಮನ್ಗಳಿಗೆ ಬೆದರಿಸಿ ಕೆಲವರು ನೀರು ಪಡೆಯುತ್ತಿದ್ದಾರೆ. ಕೆಲ ರೆಸ್ಟೋರೆಂಟ್ಗಳಿಗೂ ನೇರವಾಗಿ ನೀರು ಹೋಗುತ್ತಿದೆ. ಕೆಲವರು ನಮ್ಮ ಸಿಬ್ಬಂದಿ ಬಡಿಸಿಕೊಂಡಿದ್ದಾರೆ. ನಮಗೆ ಪಿವಿಸಿ ಪೈಪ್ ಕಟ್ ಮಾಡಲು ಅನುಮತಿ ನೀಡಬೇಕು ಎಂದು ಕೋರಿದರು.
ಇದಕ್ಕೆ ಉತ್ತರಿಸಿದ ಶಾಸಕ ಎಚ್.ಕೆ. ಪಾಟೀಲರು, ಈ ಬಗ್ಗೆ ಠಾಣೆಗೆ ದೂರು ಏಕೆ ನೀಡಿಲ್ಲ. ನಿಮ್ಮ ವರ್ತನೆಯಲ್ಲೂ ಸಾಕಷ್ಟು ವ್ಯತ್ಯಾಸಗಳಿವೆ. ಅದನ್ನು ಸುಧಾರಿಸಿಕೊಳ್ಳುವಂತೆ ತಾಕೀತು ಮಾಡಿದರು.
ಸಭೆಯಲ್ಲಿ ನಗರಸಭೆ ಸದಸ್ಯರಾದ ಎಲ್.ಡಿ. ಚಂದಾವರಿ, ಬಿ.ಎ. ಮುಲ್ಲಾ, ಚುಮ್ಮಿ ನದಾಫ, ಇಮ್ತಿಯಾಜ ಶಿರಹಟ್ಟಿ, ಚಂದ್ರಶೇಖರಗೌಡ ಕರಿಸೋಮನಗೌಡ್ರ, ಶಕುಂತಲಾ ಅಕ್ಕಿ, ಪೂರ್ಣಿಮಾ ಭರದ್ವಾಡ, ಲಕ್ಷ್ಮಿ ಸಿದ್ದಮ್ಮನಹಳ್ಳಿ, ಪರವೀನಬಾನು ಮುಲ್ಲಾ, ಪದ್ಮಾ ಕಟಗಿ, ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ಎಇಇ ಎಚ್.ವಿ. ಬಂಡಿವಡ್ಡರ ಸೇರಿ ಅನೇಕರಿದ್ದರು.
====
ಸ್ಥಗಿತಗೊಂಡಿರುವ ವಾಲ್ಮನ್ಗಳ ವೇತನ ಪಾವತಿಗೆ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು, ಅವಳಿ ನಗರದಲ್ಲಿ ದುರಸ್ತಿಗೆ ಇರುವ ಕೊಳವೆ ಬಾವಿಗಳ ರಿಪೇರಿಗೆ ಟಾಸ್ಕ್ ಫೋರ್ಸ್ ಸಮಿತಿಯಿಂದ ತಕ್ಷಣಕ್ಕೆ 5 ಲಕ್ಷ ರೂ. ಬಿಡುಗಡೆಯಾಗಲಿದೆ. ಅಗತ್ಯ ಬಿದ್ದರೆ ಹೆಚ್ಚಿನ ಹಣವನ್ನು ನನ್ನ ಅನುದಾನ ಬಳಸಿಕೊಳ್ಳಬಹುದು.
-ಎಚ್.ಕೆ. ಪಾಟೀಲ, ಶಾಸಕ, ಗದಗ
===
ಒಂಭತ್ತು ಝೋನ್ಗಳ ಪೈಕಿ 7 ಝೋನ್ಗಳಲ್ಲಿ ವಾಲ್ವ್ ಕೂಡಿಸುವುದು ಸೇರಿ ಎಲ್ಲ ಕೆಲಸಗಳು ಮಾ.31 ರೊಳಗೆ ಮುಗಿಯಬೇಕು. ಕಾಮಗಾರಿ ಮುಗಿದ ಝೋನ್ಗಳ ಮೂಲಕ ನೀರು ಪೂರೈಕೆ ಮಾಡಬೇಕು.
– ಎಂ.ಸುಂದರೇಶಬಾಬು, ಜಿಲ್ಲಾಧಿಕಾರಿ