ರೇಣುಕಾಚಾರ್ಯ ಎಂಬುದು ಕಾಲ್ಪನಿಕ ವ್ಯಕ್ತಿ-ಸರ್ಕಾರದಿಂದ ಜಯಂತಿ ಬೇಡ
ಸರ್ಕಾರದ ಆದೇಶ ಪ್ರಶ್ನಿಸಿ ಮನವಿ ನೀಡಲು ಗದಗನ ಬಸವದಳದ ನಿರ್ಣಯ
ಪ್ರಜಾಪಥ ವಾರ್ತೆ
ಗದಗ :ರೇಣುಕಾಚಾರ್ಯ ಎಂಬ ವ್ಯಕ್ತಿ ಕೆಲವರ ಕಲ್ಪನೆಯೇ ವಿನ: ವಾಸ್ತವದಲ್ಲಿ ಇಂಥ ವ್ಯಕ್ತಿಯ ಅಸ್ಥಿತ್ವದ ಬಗ್ಗೆ ನಿದರ್ಶನಗಳಿಲ್ಲ. ಹೀಗಿರುವಾಗ ರೇಣುಕಾಚಾರ್ಯ ಜಯಂತಿಯನ್ನು ಆಚರಿಸುವುದಾಗಿ ಮಾರ್ಚ್.16 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆದೇಶ ಹೊರಡಿಸಿದ್ದು ಸಂಪೂರ್ಣ ಅವೈಜ್ಞಾನಿಕವಾಗಿದೆ ಎಂದು ಬಸವದಳದ ಅಧ್ಯಕ್ಷ ವಿ.ಕೆ ಕರೇಗೌಡ್ರ ಹೇಳಿದ್ದಾರೆ.
ರವಿವಾರ ನಗರದ ಶಿವಾನಂದ ನಗರದಲ್ಲಿರುವ ಬಸವದಳದ 1483ನೇ ಶರಣ ಸಂಗಮ ಕಾರ್ಯಕ್ರಮಲ್ಲಿ ವಚನ ತತ್ವಾನುಭವ ಚಿಂತನೆ ಹಾಗೂ ಅಲ್ಲಮಪ್ರಭುಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಂ.ಚಿದಾನಂದಮೂರ್ತಿ, ಎಂ.ಎಂ. ಕಲಬುರ್ಗಿ ಮುಂತಾದ ಸಂಶೋಧಕರು ಸಮಗ್ರ ಸಂಶೋಧನೆ ನಡೆಸಿ ರೇಣುಕಾಚಾರ್ಯ ಎಂಬ ವ್ಯಕ್ತಿ ಕೇವಲ ಕಲ್ಪನಾಧಾರಿತ ಎಂಬ ಸತ್ಯವನ್ನು ಜಗತ್ತಿಗೆ ತಿಳಿಸಿದ್ದಾರೆ. ವಚನಕಾರ ರೇವಣಸಿದ್ಧರ ಹೆಸರನ್ನೇ ರೇಣುಕಾರಾಧ್ಯ, ರೇಣುಕಾಚಾರ್ಯ ಎಂಬಿತ್ಯಾದಿ ನಾಮಗಳನ್ನು ಬಳಸಿ ತಿರುಚಲಾಗಿದೆ. ಅಸ್ಥಿತ್ವವೇ ಇಲ್ಲದ ಪೌರಾಣಿಕ ರೇಣುಕಾಚಾರ್ಯ ಜಯಂತಿ ಆಚರಣೆಗೆ ಸರ್ಕಾರ ಮುಂದಾಗಿರುವುದು ಪ್ರಶ್ನಾರ್ಹವಾಗಿದ್ದು, ಈ ಕುರಿತು ಮುಖ್ಯಮಂತ್ರಿಗಳಿಗೆ ಬಸವದಳದ ವತಿಯಿಂದ ಪತ್ರ ಬರೆದು ಈ ಜಯಂತಿ ಆಚರಣೆಯನ್ನು ಹಿಂತೆಗೆದುಕೊಳ್ಳಬೇಕೆಂದು ಮನವಿ ಮಾಡಲಾಗುವುದು ಎಂದರು.
ಬಸವದಳದ ಕಾರ್ಯಾಧ್ಯಕ್ಷ ಪ್ರಕಾಶ ಅಸುಂಡಿ ಮಾತನಾಡಿ, ಜನನವೇ ಆಗಿರದ, ಯಾವುದೇ ಆದರ್ಶಗಳನ್ನು ಬದುಕದ ರೇಣುಕಾಚಾರ್ಯರ ಜಯಂತಿ ಆಚರಣೆಗಿಂತ, ಬಸವಾದಿ ಪ್ರಮಥರಲ್ಲಿ ಓರ್ವರಾಗಿದ್ದ ರೇವಣಸಿದ್ಧರ ಜಯಂತಿ ಆಚರಿಸುವುದು ಸೂಕ್ತವಾಗಿರಲಿದೆ ಎಂದರು.
ಬಿ.ವಿ ಕಾಮಣ್ಣವರ ಅಲ್ಲಮಪ್ರಭುಗಳ ಜೀವನ-ಸಾಧನೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕೆ.ವಿ ಗೋಣಿ ಸ್ವಾಗತಿಸಿದರು. ಮೃತ್ಯುಂಜಯ ಜಿನಗಾ ವಚನ ಚಿಂತನೆ ನಡೆಸಿದರು. ರಾಮಣ್ಣ ಕಳ್ಳಿಮನಿ ನಿರೂಪಿಸಿದರೆ ಎಂ.ಬಿ ಲಿಂಗದಾಳ ವಂದಿಸಿದರು.
ಈ ಸಂದರ್ಭದಲ್ಲಿ ಅಶೋಕ ಬರಗುಂಡಿ, ಎಸ್.ಎ ಮುಗದ, ಶಂಕ್ರಣ್ಣ ಅಂಗಡಿ, ಶಾಂತವೀರ ನಾಯಿನೇಗಲಿ, ಎಸ್.ಎನ್ ಹಕಾರಿ, ಎಸ್.ಬಿ ಮೆಣಸಗಿ, ಸಿದ್ಧಲಿಂಗಪ್ಪ ಹಂಚಿನಾಳ, ವೀರೇಶ ಲಿಂಗದಾಳ, ನೀಲಗಂಗಾ ಹಂಚಿನಾಳ, ಮಂಗಳಕ್ಕ ಕಾಮಣ್ಣವರ, ಲಿಂಗಾಕ್ಷಿ ಜಿನಗಾ, ರೇಣುಕಾ ಕರೇಗೌಡ್ರ, ಮಂಗಳಕ್ಕ ನಾಲವಾಡ ಮುಂತಾದವರಿದ್ದರು.