ಗದಗನಲ್ಲಿ ರಾಜಕೀಯ ಅಸ್ತಿತ್ವಕ್ಕಾಗಿ ಬಾಲಿಶ ಹೇಳಿಕೆ

Spread the love

ಅನಿಲ್ ಮೆಣಸಿನಕಾಯಿ ಹೇಳಿಕೆಗೆ ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ಖಂಡನೆ

ಪ್ರಜಾಪಥ ವಾರ್ತೆ
ಗದಗ: ಕಳೆದ ಚುನಾವಣೆಯಲ್ಲಿ ಸೋಲಿನ ಬಳಿಕ ಹಾಗೂ ಬಿಜೆಪಿ ಪಕ್ಷದಲ್ಲಿ ನಿರ್ಲಕ್ಷ್ಯಕ್ಕೊಳಗಾಗಿರುವ ಅನಿಲ್ ಮೆಣಸಿನಕಾಯಿ ಅವರು ಗದಗನಲ್ಲಿ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಟೀಕಿಸುತ್ತಿದ್ದಾರೆ ಎಂದು ಅಖಿಲ ಕರ್ನಾಟಕ ಮುಸ್ಲಿಂ ಮಹಾಸಭಾ ರಾಜ್ಯಾಧ್ಯಕ್ಷ ಎಂ.ಎಸ್.ನಾಗರಕಟ್ಟಿ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜವಳಗಲ್ಲಿಯಲ್ಲಿ ಮುಸ್ಲಿಂರು ಅಕ್ರಮವಾಗಿ ವಾಸವಾಗಿದ್ದಾರೆ ಎಂಬ ಹೇಳಿಕೆ ಹಾಸ್ಯಾಸ್ಪದವಾಗಿದೆ. ಅವರು ಎರಡು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರೂ ಯಾವ ಪ್ರದೇಶದಲ್ಲಿ ಯಾರ್ಯಾರು ವಾಸವಿದ್ದಾರೆ ಎಂಬ ಅರಿವು ಕೂಡ ಅವರಿಗಿದ್ದಂತೆ ಕಾಣುತ್ತಿಲ್ಲ.
ಜವುಳಗಲ್ಲಿಯಲ್ಲಿ ಕೇವಲ ಮುಸಲ್ಮಾನರು ವಾಸವಾಗಿಲ್ಲ, ಅಲ್ಲಿ ದಲಿತರು, ಹಿಂದುಳಿದವರು ಹಾಗೂ ಬೇರೆ ಜಾತಿಯ ಜನರೂ ವಾಸವಾಗಿದ್ದಾರೆ. ಅಲ್ಲಿ ವಾಸಿಉವ ನಿವಾಸಿಗಳು ಅವರ ಪೂರ್ವಜರ ಕಾಲದಿಂದಲೂ ಬದುಕುತ್ತಿದ್ದಾರೆ. ಅದಕ್ಕಾಗಿ ಸರ್ಕಾರವಿದೆ, ಕಾಯ್ದೆ ಕಾನೂನು ಇದ್ದು ಅದನ್ನು ಗೌರವಿಸುವುದು ಎಲ್ಲರ ಕರ್ತವ್ಯ.
ಕೇವಲ ಮುಸಲ್ಮಾನರನ್ನು ಗುರಿಯಾಗಿಸಿ ಅವರನ್ನು ಪುಢಾರಿಗಳು ಎಂದು ಕರೆಯುವ ಮುಖಾಂತರ ಸಂವಿಧಾನ ವಿರೋಧಿ ಪದ ಬಳಸಿದ್ದಲ್ಲದೆ ಮೂಲಭೂತ ಹಕ್ಕುಗಳ ಉಲ್ಲಂಘನೆ ಮಾಡಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಹಿಜಾಬ್ ಅರಬ್ ದೇಶದ ಜನರ ಹಾಕಿಕೊಳ್ಳಬೇಕು. ಅಲ್ಲಿ ಬಿಸಿಲು ಇರುತ್ತದೆ ಎಂದು ವೈಜ್ಞಾನಿಕ ಕಾರಣ ನೀಡಿ, ಭಾರತದಲ್ಲಿ ಅದನ್ನು ಧರಿಸುವ ಅಗತ್ಯವಿಲ್ಲ ಎಂಬ ಧಾಟಿಯಲ್ಲಿ ಆಡಿರುವ ಮಾತು ಕೂಡ ಹಾಸ್ಯಾಸ್ಪದ. ಅವರಿಗೆ ಅಧ್ಯಯನದ ಕೊರತೆ ಎದ್ದು ಕಾಣುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.
ಮುಸ್ಲಿಂ ಧರ್ಮಗುರುಗಳನ್ನು ಕಾಂಗ್ರೆಸ್ಸ್ ಏಜೆಂಟರೆಂದು ಆಪಾದನೆ ಮಾಡಿದ್ದೀರಿ. ಹಾಗಾದರೆ ತಮ್ಮ ಸ್ವಜಾತಿಯ ಗುರುಗಳು ಯಾರ ಏಜೆಂಟರೆಂದು ಪ್ರಶ್ನೆ ಮೂಡುತ್ತದೆ. ಮುಸ್ಲಿಮರನ್ನು ಟೀಕಿಸಿದರೆ ಬಹುಬೇಗ ಪ್ರಚಾರ ಸಿಗುತ್ತದೆ ಎಂಬ ಏಕೈಕ ಕಾರಣಕ್ಕೆ ಇಂತಹ ಬಾಲಿಶ ಹೇಳಿಕೆಗಳ ಮುಖಾಂತರ ತಮ್ಮ ಪಕ್ಷದಲ್ಲಿ ಪ್ರಾಬಲ್ಯ ಸಾಧಿಸಲು ಸಾಧ್ಯವಾಗುವುದಿಲ್ಲ. ಆಯಾ ಧರ್ಮದ ಆಚಾರ, ವಿಚಾರ, ಸಂಪ್ರದಾಯಗಳ ಬಗ್ಗೆ ನೋಡಿ ಮಾತನಾಡಲಿ ಎಂದು ಎಂ.ಎಸ್.ನಾಗರಕಟ್ಟಿ ತಿರುಗೇಟು ನೀಡಿದ್ದಾರೆ.

Leave a Reply

Your email address will not be published. Required fields are marked *