ನರೇಗಲ್ಲ ಹಿರೇಮಠ ಸ್ವಾಮೀಜಿ ಕಾರು ಅಪಘಾತ-ಚಾಲಕ ಸ್ಥಳದಲ್ಲೇ ಸಾವು-ಶ್ರೀಗಳು ಆಸ್ಪತ್ರೆಗೆ ದಾಖಲು
ಪ್ರಜಾಪಥ ವಾರ್ತೆ
ಗದಗ/ನರಗುಂದ: ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ನರೇಗಲ್ಲದ ಹಿರೇಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೊಳಗಾಗಿ ಕಾರಿನ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನರಗುಂದ ಹೊರವಲಯದಲ್ಲಿ ನಡೆದಿದೆ.
ಅಪಘಾತದಲ್ಲಿ ಗಾಯಗೊಂಡಿರುವ ಸ್ವಾಮೀಜಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ಸಂಚರಿಸುತ್ತಿದ್ದ ಕಾರು ಗದಗ ಜಿಲ್ಲೆಯ ನರಗುಂದ ಪಟ್ಟಣದ ಹೊರವಲಯದಲ್ಲಿ ಮರಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಚಾಲಕ ವೀರೇಶ ಕುರುಡಗಿ (38) ಸ್ಥಳದ್ಲಲೇ ಸಾವಿಗೀಡಾಗಿದ್ದಾರೆ.
ಈ ಅಪಘಾತದಲ್ಲಿ ಶ್ರೀಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅವರನ್ನು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನರಗುಂದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಅಪಘಾತ ಸಂಭವಿಸಿದೆ.