ನಾನು ಬೇಡವಾದರೆ ಮುಖ್ಯಮಂತ್ರಿಗೆ ಹೇಳಿ-ಸ್ವಪಕ್ಷದ ಶಾಸಕನಿಗೆ ಹೇಳಿದ ಸಚಿವರಾರು?

Spread the love

 

ಪ್ರಜಾಪಥ ವಾರ್ತೆ

ಗದಗ: ಮುಖ್ಯಮಂತ್ರಿಗಳು ನನ್ನನ್ನು ಗದಗ ಜಿಲ್ಲೆಗೆ ಉಸ್ತುವಾರಿ ಮಂತ್ರಿಯಾಗಿ ನೇಮಿಸಿದ್ದಾರೆ. ನಾನಿದ್ದಾಗ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಯಂತಹ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಖಡಕ್ ಆಗಿಯೇ ಹೇಳಿದರು.

ಸೋಮವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯು ಎರಡೂವರೆ ಗಂಟೆಗಳ ಕಾಲ ಅಭಿವೃದ್ಧಿ, ಅನುದಾನ ಕುರಿತು ಚರ್ಚೆ ನಡೆಯುತ್ತಿದ್ದವು. ಎಲ್ಲರೂ ಒಟ್ಟಾಗಿಯೇ ಅಧಿಕಾರಿಗಳನ್ನು ತರಾಟೆಗೆ ತೆಗೆದಕೊಳ್ಳುತ್ತಿದ್ದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕುರಿತ ಚರ್ಚೆ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಅವರು ಅಕ್ರಮವಾಗಿ ಸಾಗಿಸುವ ಮರಳು, ಗರಸು ಸೇರಿ ಎಲ್ಲದಕ್ಕೂ ಕಡಿವಾಣ ಹಾಕುವಂತೆ ಹಾಗೂ ಕಾನೂನಿನ ನಿಯಮಗಳನ್ನು ಹಚ್ಚುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದರು.

ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಕಳಕಪ್ಪ ಬಂಡಿ ಅವರು, ಎಲ್ಲವನ್ನೂ ಬಂದ್ ಮಾಡಿದರೆ ಮರಳನ್ನು ಅಮೇರಿಕದಿಂದ ತರಬೇಕೇನು ಎಂದು ಏರುಧ್ವನಿಯಲ್ಲೇ ಆಕ್ಷೇಪಿಸಿದ್ದಲ್ಲದೇ ಬೇರೆ ಕಡೆಯಿಂದ ಬಂದು ಆದೇಶ ಮಾಡಿ ಹೋಗಿ ಬಿಡ್ತೀರಿ. ಕ್ಷೇತ್ರದ ಜನತೆಗೆ ಉತ್ತರ ಕೊಡುವವರು ನಾವು ಎಂಬ ಮಾತಿನ ಮೂಲಕ ಸ್ವಪಕ್ಷದ ಶಾಸಕರಾಗಿ ಸಚಿವ ಬಿ.ಸಿ. ಪಾಟೀಲರಿಗೆ ಮುಜುಗುರಕ್ಕೆ ಒಳಪಡಿಸಿದರು.

ಶಾಸಕ ಬಂಡಿಯವರ ಮಾತಿನಿಂದ ಗರಂ ಆದ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಅವರು, ನಾನೇನು ಇಲ್ಲಿಗೇ ಉಸ್ತುವಾರಿ ಮಂತ್ರಿ ಮಾಡಿ ಎಂದು ಕೇಳಿಕೊಂಡು ಬಂದಿಲ್ಲ. ಪಕ್ಷದ ವರಿಷ್ಠರ ನಿರ್ಣಯದಿಂದ ಮುಖ್ಯಮಂತ್ರಿಗಳು ಗದಗ ಜಿಲ್ಲೆಗೆ ನನ್ನನ್ನು ನೇಮಿಸಿದ್ದಾರೆ. ನನ್ನ ಆಡಳಿತಾವಧಿಯಲ್ಲಿ ಅಕ್ರಮಗಳಿಗೆ ಅವಕಾಶ ನೀಡುವುದಿಲ್ಲ.

ಅಕ್ರಮಗಳಿಗೆ ಅವಕಾಶ ನೀಡುತ್ತಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಹೇಳಿ. ಬದಲಾಯಿಸಿದರೆ ಹೋಗುತ್ತೇನೆ ಎಂದು ತಿರುಗೇಟು ನೀಡಿದರು.

ಇವರೀರ್ವರ ವಾಕ್ಸಮರಕ್ಕೆ ಜಿಲ್ಲೆಯವರೇ ಆಗಿರುವ ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ ಅವರು ಮೂಕ ಪ್ರೇಕ್ಷಕ ರಂತಿದ್ದು, ವಾಗ್ಯುದ್ಧ ಏರುವಾಗ ಬಂಡಿ ಯವರಿಗೆ ಸುಮ್ಮನಿರಲು ಸೂಚಿಸಿ ದರಾದರೂ ಅವರು ಸ್ಪಂದಿಸಲಿಲ್ಲ.

ಮಾತು ಮುಂದುವರಿಸಿದ ಬಂಡಿಯವರು, ‘ಮಿನಿಸ್ಟçಗಿರಿ’ ಅಷ್ಟೇ ಮಾಡಬೇಕು ಎಂದೂ ಪ್ರತಿಪಾದಿಸಿದರು.

ಮತ್ತಷ್ಟು ಕೆರಳಿದ ಸಚಿವ ಬಿ.ಸಿ. ಪಾಟೀಲರು, ಹಾಗಿದ್ದರೆ ಮೀಟಿಂಗ್ ಏಕೆ ಮಾಡಬೇಕು. ನೀವು ಮೀಟಿಂಗ್‌ಲ್ಲಿ ಈ ರೀತಿ ಮಾತನಾಡಬಾರದು. ನಾನು ಅಕ್ರಮಗಳಿಗೆ ಅವಕಾಶ ನೀಡಲ್ಲ. ನನಗೆ ವಹಿಸಿದ ಕೆಲಸವನ್ನು ಮಾಡೇ ಮಾಡುತ್ತೇನೆ ಎಂದು ಹೇಳಿದರು.

ಬಳಿಕ ಸಚಿವ ಬಿ.ಸಿ. ಪಾಟೀಲ ಅವರು ಕೆಲಕಾಲ ಸಭೆ ಮುಂದುವರಿಸಿದರು.

Leave a Reply

Your email address will not be published. Required fields are marked *