ಗದುಗಿನ ಶಿವಾನಂದ ಮಠದ ಉತ್ತರಾಧಿಕಾರಿ ವಿವಾದ ಮುಂದುವರಿಕೆ ಹಿನ್ನಲೆ
ಅಧಿಕಾರಿಗಳ ಮಧ್ಯಪ್ರವೇಶ- ಎಲ್ಲ ಕಾರ್ಯಕ್ರಮ ರದ್ದುಪಡಿಸಿ ತಹಶೀಲ್ದಾರ್ ಆದೇಶ
ವರಸೆ ಬದಲಿಸಿದ ಹಿರಿಯ ಶ್ರೀಗಳು
ಪ್ರಜಾಪಥ ವಾರ್ತೆ
ಗದಗ: ಉತ್ತರಾಧಿಕಾರಿ ವಿವಾದದ ಹಿನ್ನಲೆಯಲ್ಲಿ ಉದ್ವಿಗ್ನ ಪರಿಸ್ಥಿತಿಗೆ ಕಾರಣವಾಗಿದ್ದ ಶಿವಾನಂದ ಬೃಹನ್ಮಠದ ಜಾತ್ರಾ ಮಹೋತ್ಸವದ ಎಲ್ಲ ಕಾರ್ಯಕ್ರಮಗಳನ್ನು ಶಾಂತಿ ಸುವ್ಯವಸ್ಥೆ ಕಾಪಾಡಲು ಗದಗ ತಹಶೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ ರದ್ದುಪಡಿಸಿ ಆದೇಶಿಸಿದ್ದಾರೆ.
ತಹಶೀಲ್ದಾರ್ ಆದೇಶದಿಂದಾಗಿ ಶುಕ್ರವಾರ ರಾತ್ರಿ ನಡೆಯಬೇಕಿದ್ದ ಸತ್ಸಂಗ, ಶನಿವಾರ ನಡೆಯಬೇಕಿದ್ದ ಶ್ರೀಗಳ ಅಡ್ಡಪಲ್ಲಕ್ಕಿ ಮಹೋತ್ಸವ, ರಥೋತ್ಸವಗಳು ರದ್ದಾಗಿವೆ.
ಈ ಬಗ್ಗೆ ಶಿವಾನಂದ ಮಠದ ಹಿರಿಯ ಶ್ರೀ ಅಭಿನವ ಶಿವಾನಂದ ಸ್ವಾಮೀಜಿ ಹಾಗೂ ಕಿರಿಯ ಶ್ರೀ ಸದಾಶಿವಾನಂದ ಭಾರತಿ ಸ್ವಾಮೀಜಿಗಳಿಗೆ ಪೊಲೀಸ್ ಅಧಿಕಾರಿಗಳು ಶುಕ್ರವಾರ ರಾತ್ರಿ ಮಠಕ್ಕೆ ಭೇಟಿ ನೀಡಿ, ತಹಶೀಲ್ದಾರ್ ಆದೇಶದ ಮಾಹಿತಿ ನೀಡಿದರು.
ತಹಶೀಲ್ದಾರ್ ಆದೇಶದಂತೆ ಭಕ್ತರು ಮಠದ ಕತೃಗದ್ದುಗೆಯ ದರ್ಶನ ಪಡೆಯಬಹುದಾಗಿದೆ. ಅಡ್ಡಪಲ್ಲಕ್ಕಿ, ರಥೋತ್ಸವ, ಸತ್ಸಂಗ ಸೇರಿದಂತೆ ಯಾವದೇ ಸಮಾರಂಭಗಳನ್ನು ನಡೆಸುವಂತಿಲ್ಲ ಎಂದು ಮಠದ ಮೂಲಗಳು ತಿಳಿಸಿವೆ.
ಏನಾಗಿದೆ?: ನಾಲ್ಕು ವರ್ಷಗಳ ಹಿಂದೆ ಶಿವಾನಂದ ಬೃಹನ್ಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದ ಶಿವಾನಂದ ಮಠದ ಘೋಡಗೇರಿ ಶಾಖಾ ಮಠದ ಕೈವಲ್ಯಾನಂದ ಶ್ರೀಗಳನ್ನು ಒಮ್ಮಿಂದ ಒಮ್ಮೆಲೆ ಹಿರಿಯ ಶ್ರೀ ಅಭಿನವ ಶಿವಾನಂದ ಶ್ರೀಗಳು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಕಿರಿಯ ಶ್ರೀಗಳನ್ನು ಉತ್ತರಾಧಿಕಾರಿ ಹುದ್ದೆಯಿಂದ ವಜಾಗೊಳಿಸಿದ್ದಾಗಿ ದಾಖಲೆ ನೋಂದಾಯಿಸಿದ್ದರು. ಹಿರಿಯ ಶ್ರೀಗಳ ನಡವಳಿಕೆಯನ್ನು ಖಂಡಿಸಿ ಕಿರಿಯ ಶ್ರೀ ಧಾರವಾಡದ ಹೈಕೋರ್ಟ್ ಪೀಠದ ಮೆಟ್ಟಿಲೇರಿದ್ದರು.
ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯ ಡಿಸೆಂಬರ್‌ನಲ್ಲಿ ಶಿವರಾತ್ರಿಯಂದು ಹಾಗೂ ಮರುದಿನದಂದು ನಡೆಯುವ ಜಾತ್ರಾ ಮಹೋತ್ಸವದಲ್ಲಿ ಕಿರಿಯ ಶ್ರೀಗಳ ಹಕ್ಕಿಗೆ ಯಾವುದೇ ಧಕ್ಕೆಯಾಗದಂತೆ ಮಧ್ಯಂತರ ಆದೇಶ ನೀಡಿತ್ತು.
ನ್ಯಾಯಾಲಯದ ಆದೇಶದ ಮಧ್ಯೆಯೂ ಹಿರಿಯ ಶ್ರೀಗಳು ಕಿರಿಯ ಶ್ರೀಗಳನ್ನು ಮಠದ ಜಾತ್ರೆಯ ಯಾವುದೇ ಕಾರ್ಯದಲ್ಲಿ ತೊಡಗಿಸಿಕೊಂಡಿರಲಿಲ್ಲ. ಕಿರಿಯ ಶ್ರೀಗಳ ಭಕ್ತರು ಹಿರಿಯ ಶ್ರೀಗಳ ಮನ ಒಲಿಸಲು ಸಾಕಷ್ಟು ಪ್ರಯತ್ನಿಸಿದರೂ ಒಪ್ಪಿಗೆ ನೀಡಿರಲಿಲ್ಲ.
ವರಸೆ ಬದಲಿಸಿದ ಹಿರಿಯ ಶ್ರೀಗಳು: ಶುಕ್ರವಾರ ಸಂಜೆ ಮಠದಲ್ಲಿ ನಡೆದ ಭಕ್ತರ ಸಭೆಯಲ್ಲಿ ಮಠದ ಭಕ್ತರ ಅಪೇಕ್ಷೆ ಹಾಗೂ ಮಠದ ಪರಂಪರೆಗೆ ಧಕ್ಕೆಯಾಗಬಾರದೆಂಬ ಹಿನ್ನೆಲೆಯಲ್ಲಿ ಪ್ರವಚನ ಕಾರ್ಯಕ್ರಮದಲ್ಲಿ ಕಿರಿಯ ಶ್ರೀಗಳೊಂದಿಗೆ ಸಾನ್ನಿಧ್ಯ ವಹಿಸುವೆ. ಪರಂಪರೆಯಂತೆ ತಾವೊಬ್ಬರೇ ಕಿರೀಟ ಪೂಜೆ, ರಥೋತ್ಸವ, ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಕೂಡುವುದಾಗಿ ತಿಳಿಸಿದ್ದರು.
ಹಿರಿಯ ಶ್ರೀಗಳ ಘೋಷಣೆಗೆ ಕಿರಿಯ ಶ್ರೀಗಳು ಸಮ್ಮತಿ ಸೂಚಿಸಿದ್ದರು. ಆದರೆ, ರಾತ್ರಿ ಒಮ್ಮಿಂದೊಮ್ಮೆಲೆ ತಮ್ಮ ನಡೆ ಬದಲಿಸಿದ ಹಿರಿಯ ಶ್ರೀಗಳು ತಾವೊಬ್ಬರೇ ಎಲ್ಲ ಕಾರ್ಯಕ್ರಮಗಳಲ್ಲಿ ಸಾನ್ನಿಧ್ಯ ವಹಿಸುವುದಾಗಿ ಘೋಷಿಸಿದರು.
ಇದರಿಂದ ಕೆರಳಿದ ಕಿರಿಯ ಶ್ರೀಗಳ ಭಕ್ತರು ಮುಂದಿನ ಕಾರ್ಯಯೋಜನೆ ಬಗ್ಗೆ ಸಭೆ ನಡೆಸಿದರು. ಮಠದ ಪರಿಸರದಲ್ಲಿ ಶಾಂತಿ, ಸುವ್ಯವಸ್ಥೆ ಕದಡಬಹುದೆಂಬ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳ ಶಿಫಾರಸಿನಂತೆ ತಹಶೀಲ್ದಾರರು ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಿ ಆದೇಶಿಸಿದರು. ಶಿವಾನಂದ ಬೃಹನ್ಮಠದ ಆವರಣದಲ್ಲಿ ಈಗ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಮಠದ ಭಕ್ತರು ಹಾಗೂ ಪೊಲೀಸರ ಒತ್ತಾಸೆಯಂತೆ ಕಿರಿಯ ಶ್ರೀಗಳನ್ನು ಕರೆದುಕೊಂಡು ಅಡ್ಡಪಲ್ಲಕ್ಕಿ, ರಥೋತ್ಸವ ನಡೆಸಲು ಒಪ್ಪಿಕೊಂಡಿದ್ದ ಹಿರಿಯ ಶ್ರೀಗಳು ಏಕಾಏಕಿ ತಮ್ಮ ನಿರ್ಧಾರ ಬದಲಿಸಿರುವುದು ಮನಸ್ಸಿಗೆ ನೋವು ತಂದಿದೆ
-ಶಿವನಗೌಡ ರಾಯನಗೌಡರ, ಶಿವಾನಂದ ಪಲ್ಲೇದ, ಮಠದ ಭಕ್ತರು