ಪ್ರಜಾಪಥ ವಾರ್ತೆ
ಕುಶಾಲನಗರ (ಕೊಡಗು): ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿಗಳಲ್ಲಿ ಅತ್ಯಂತ ಪ್ರತಿಷ್ಟಿತವಾದ ದತ್ತಿ ‘ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ’ ಈ ದತ್ತಿಯನ್ನು ಗೌರಮ್ಮರವರ ಪುತ್ರ ಬಿ.ಜಿ.ವಸಂತ ರವರು ಕೊಡಗಿನ ಮಹಿಳಾ ಲೇಖಕಿಯರು ಪ್ರಕಟ ಪಡಿಸಿದ ಉತ್ತಮ ಕೃತಿಗೆ ಪ್ರಶಸ್ತಿ ನೀಡಿ ಗೌರವಿಸುವ ಸಲುವಾಗಿ ಸ್ಥಾಪಿಸಲಾಗಿದೆ. ಇಲ್ಲಿಯವರೆಗೆ 19 ಲೇಖಕಿಯರಿಗೆ ಈ ಪ್ರಶಸ್ತಿ ನೀಡಲಾಗಿದೆ. 2023-24 ನೇ ಸಾಲಿನ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದ್ದು 9 ಲೇಖಕಿಯರು ತಮ್ಮ ಕೃತಿಗಳನ್ನು ಪ್ರಶಸ್ತಿಗಾಗಿ ಪ್ರಸ್ತುತ ಪಡಿಸಿದ್ದರು.
ಜಿಲ್ಲೆಯ ಹಿರಿಯ ಮೂರು ಸಾಹಿತಿಗಳನ್ನು ತೀರ್ಪುಗಾರರನ್ನಾಗಿಸಿ ಅವರು ಎಲ್ಲ ಪುಸ್ತಕಗಳನ್ನು ಪರಮಾರ್ಶಿಸಿ ಶ್ರೀಮತಿ ಕೆ.ಜಿ.ರಮ್ಯ ಮೂರ್ನಾಡು ರವರು ರಚಿಸಿದ ‘ದಾಹಗಳ ಮೈ ಸವರುತ್ತಾ” ಕವನ ಸಂಕಲನಕ್ಕೆ ಪ್ರಶಸ್ತಿ ಲಭ್ಯವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಎಂ.ಪಿ. ಕೇಶವ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಧ್ಯಾಪಕಿಯಾಗಿರುವ ಶ್ರೀಮತಿ ಕೆ.ಜಿ ರಮ್ಯಾ ಜಿಲ್ಲೆಯ ಓರ್ವ ಅತ್ಯುತ್ತಮ ಕವಿಯತ್ರಿಯಾಗಿದ್ದಾರೆ. ಹಲವಾರು ಕವಿತೆಗಳನ್ನು ಕವಿಗೋಷ್ಠಿಗಳಲ್ಲಿ ವಾಚಿಸಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನಗಳಿಸಿದ್ದಾರೆ.