ಸ್ಕೌಟ್ಸ್, ಗೈಡ್ಸ್ ನ ರಾಜ್ಯ ಸಂಸ್ಥೆಯ ಉಪಾಧ್ಯಕ್ಷ ಎ.ಎನ್.ಮಹೇಶ್ ಭರವಸೆ
ಪ್ರಜಾಪಥ ವಾರ್ತೆ
ಕುಶಾಲನಗರ (ಕೊಡಗು): ವಿಶ್ವವ್ಯಾಪಿಯಾಗಿರುವ ಸ್ಕೌಟ್ , ಗೈಡ್ಸ್ ಸಂಸ್ಥೆಯ ಚಳುವಳಿ ಒಂದು ಯುವ ಜನಾಂಗದ ಕೂಟ. ಈ ಚಳುವಳಿಯ ಉದ್ದೇಶವು ಯುವ ಪೀಳಿಗೆಯಲ್ಲಿ ಶಿಸ್ತು, ಸಂಯಮ, ಉತ್ತಮ ನಾಯಕತ್ವ, ರಾಷ್ಟ್ರೀಯ ಭಾವೈಕ್ಯತೆ ಬೆಳೆಸುವುದರೊಂದಿಗೆ ಯುವ ಸಮೂಹದಲ್ಲಿ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಬೆಳವಣಿಗೆ ವೃದ್ಧಿಗೆ ಸಹಕಾರಿಯಾಗಿದೆ ಎಂದು ಸ್ಕೌಟ್ಸ್, ಗೈಡ್ಸ್ ನ ರಾಜ್ಯ ಸಂಸ್ಥೆಯ ಉಪಾಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.
ಮಡಿಕೇರಿ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದ ಕಛೇರಿಗೆ ಮಂಗಳವಾರ ( ಏಪ್ರಿಲ್ 30 ರಂದು ) ಭೇಟಿ ನೀಡಿ ಜಿಲ್ಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ನ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಕಛೇರಿ ಆವರಣದಲ್ಲಿ ನಿರ್ಮಿಸಲುದ್ದೇಶಿಸಿರುವ ಶತಮಾನೋತ್ಸವ ಭವನ ನಿರ್ಮಾಣಕ್ಕೆ ರಾಜ್ಯ ಸಂಸ್ಥೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳಡಿ ಸೂಕ್ತ ಅನುದಾನ ಪಡೆದು ಸ್ಕೌಟ್ಸ್ ಮತ್ತು ಗೈಡ್ಸ್ ನ ಶತಮಾನೋತ್ಸವ ಭವನ ನಿರ್ಮಾಣಕ್ಕೆ ಸ್ಕೌಟ್ಸ್ ನ ರಾಜ್ಯ ಸಂಸ್ಥೆಯ ವತಿಯಿಂದ
ಸಹಕರಿಸಲಾಗುವುದು ಎಂದರು.
ಶತಮಾನೋತ್ಸವ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ರಾಜ್ಯ ಸಂಸ್ಥೆಯ ಆಯುಕ್ತ ಪಿ.ಜಿ.ಆರ್.ಸಿಂಧ್ಯ ಅವರ ನೇತೃತ್ವದಲ್ಲಿ ಸ್ಥಳೀಯ ಶಾಸಕರು ಹಾಗೂ ಜಿಲ್ಲಾಡಳಿತದ ಸಹಕಾರ ಪಡೆಯಲು ಮುಂದಿನ ದಿನಗಳಲ್ಲಿ ಸಭೆ ನಡೆಸಿ ಕಟ್ಟಡ ನಿರ್ಮಾಣಕ್ಕೆ ಯೋಜನೆ ಸಿದ್ದತೆ ನಡೆಸಲಾಗುವುದು ಎಂದು ಮಹೇಶ್ ತಿಳಿಸಿದರು.
ಕೊಡಗಿನ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಅವರು, ಜಿಲ್ಲೆಯಲ್ಲಿ ಸಂಭವಿಸಿದ ಭೂ ಕುಸಿತ/ಪ್ರವಾಹ ಹಾಗೂ ಕರೋನ ಸಂದರ್ಭದಲ್ಲಿ ಸಂಸ್ಥೆಯ ಸ್ವಯಂ ಸೇವಕರು ಕೈಗೊಂಡ ಸಾಮಾಜಿಕ ಸೇವಾ ಕಾರ್ಯಗಳು ಅನುಕರಣೀಯವಾದುದು ಎಂದು ಮಹೇಶ್ ತಿಳಿಸಿದರು.
ಜಿಲ್ಲೆಯಲ್ಲಿ ಸ್ಕೌಟ್ಸ್ , ಗೈಡ್ಸ್ ವತಿಯಿಂದ ವಾರ್ಷಿಕವಾಗಿ ಕೈಗೊಳ್ಳುತ್ತಿರುವ ವಿವಿಧ ಕಾರ್ಯಕ್ರಮಗಳು ಹಾಗೂ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದ ಸ್ಕೌಟ್ಸ್ , ಗೈಡ್ಸ್ ನ ಜಿಲ್ಲಾ ಪ್ರಧಾನ ಆಯುಕ್ತ ಕೆ..ಟಿ.ಬೇಬಿಮ್ಯಾಥ್ಯೂ,
ಕೊಡಗಿನಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿ ಬೆಳೆದು ಬಂದ ಬಗ್ಗೆ ವಿವರಿಸಿದ ಅವರು, ಜಿಲ್ಲೆಯಲ್ಲಿ
ಸ್ಕೌಟ್ಸ್ ಮತ್ತು ಗೈಡ್ಸ್ ನ ಶತಮಾನೋತ್ಸವ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸ್ಕೌಟ್ಸ್ ಮತ್ತು ಗೈಡ್ಸ್ ನ ರಾಜ್ಯ ಸಂಸ್ಥೆಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದರು.
ಗೈಡ್ಸ್ ನ ಜಿಲ್ಲಾ ಸಹಾಯಕ ಆಯುಕ್ತ ಟಿ.ಜಿ.ಪ್ರೇಮಕುಮಾರ್ ಮಾತನಾಡಿದರು. ಸಂಸ್ಥೆಯ ಸಹ ಕಾರ್ಯದರ್ಶಿ ಬೊಳ್ಳಜೀರ ಅಯ್ಯಪ್ಪ, ಸ್ಥಾನೀಕ ಆಯುಕ್ತ ಎಚ್.ಆರ್.ಮುತ್ತಪ್ಪ, ಗೈಡ್ಸ್ ನ ಸಹಾಯಕ ಆಯುಕ್ತ ಟಿ.ಜಿ.ಪ್ರೇಮಕುಮಾರ್, ಜಿಲ್ಲಾ ಸಂಘಟಕಿ ಯು.ಸಿ.ದಮಯಂತಿ, ಸಂಸ್ಥೆಯ ಸಂಪಾಜೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಉಷಾರಾಣಿ, ಬುಲ್ ಬುಲ್ ಘಟಕದ ಮುಖ್ಯಸ್ಥೆ ಡೈಸಿ, ಗೈಡ್ಸ್ ಕ್ಯಾಪ್ಟನ್ ಗಹನ ಇತರರು ಇದ್ದರು.
ಸನ್ಮಾನ: ಇದೇ ವೇಳೆ ಸರ್ಕಾರದ ವತಿಯಿಂದ ರಾಜ್ಯಮಟ್ಟದ ಪರಿಸರ ತಜ್ಞರ ಮೌಲ್ಯಮಾಪನ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಿರುವ ಸ್ಕೌಟ್ಸ್, ಗೈಡ್ಸ್ ನ ರಾಜ್ಯ ಸಂಸ್ಥೆಯ ಉಪಾಧ್ಯಕ್ಷ ಎ.ಎನ್.ಮಹೇಶ್ ಅವರನ್ನು ಸ್ಕೌಟ್ಸ್, ಗೈಡ್ಸ್ ನ ಕೊಡಗು ಜಿಲ್ಲಾ ಸಂಸ್ಥೆಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಇದಕ್ಕೂ ಮೊದಲು ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಜಾಗದಲ್ಲಿ ನಿರ್ಮಿಸಲುದ್ದೇಶಿರುವ ಸ್ಕೌಟ್ಸ್ ನ ಶತಮಾನೋತ್ಸವ ಭವನದ ಸ್ಥಳವನ್ನು ಎ.ಎನ್.ಮಹೇಶ್ ಪರಿಶೀಲಿಸಿದರು.