ಕುಶಾಲನಗರ: ನಿವೃತ್ತಿ ಹೊಂದಿದ ಉ.ರಾ.ನಾಗೇಶ್ ಅವರಿಗೆ ಆತ್ಮೀಯ ಬೀಳ್ಕೊಡುಗೆ
ಪ್ರಜಾಪಥ ವಾರ್ತೆ
ಕುಶಾಲನಗರ, (ಕೂಡಿಗೆ): ಸರ್ಕಾರಿ ಅಧಿಕಾರಿಗಳು ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವುದರ ಮೂಲಕ ಸಮಾಜದಲ್ಲಿ ಗೌರವ ಸಂಪಾದನೆ ಮಾಡಬೇಕು ಎಂದು ಕೂಡಿಗೆ ಡಯಟ್ ಪ್ರಾಂಶುಪಾಲ ಚಂದ್ರಕಾಂತ ಹೇಳಿದರು.
ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ (ಏಪ್ರಿಲ್ 30) ಉ.ರಾ.ನಾಗೇಶ್ ಅವರಿಗೆ ಶಾಲೆಯ ವತಿಯಿಂದ ಏರ್ಪಡಿಸಿದ್ದ ಆತ್ಮೀಯ ಬೀಳ್ಕೊಡುಗೆ ಸಮಾರಂಭದಲ್ಲಿ ನಾಗೇಶ್ ಅವರನ್ನು ಸನ್ಮಾನಿಸಿ ಮಾತನಾಡಿದರು.
ಪ್ರತಿ ಸರ್ಕಾರಿ ನೌಕರರಿಗೆ ನಿವೃತ್ತಿ ಅನಿವಾರ್ಯ. ಯಾವುದೇ ಇಲಾಖೆಯಲ್ಲಿ ತಮ್ಮ ಕೆಲಸವನ್ನು ಯಶಸ್ವಿಯಾಗಬೇಕಾದರೆ ಮಾನವೀಯತೆ ಮತ್ತು ಸರಳತೆಯಿರಬೇಕು. ನಾಗೇಶ್ ವೃತ್ತಿ ಮತ್ತು ಪ್ರವೃತ್ತಿಯಿಂದ ಉತ್ತಮ ಹೆಸರು ಗಳಿಸಿದ್ದಾರೆ ಎಂದರು.
ಜಿಲ್ಲಾ ಜನಪದ ಪರಿಷತ್ ನ ಅಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಚಿತ್ರಕಲಾ ಕ್ಷೇತ್ರದಲ್ಲಿ ಉತ್ತಮ ಪ್ರಾವೀಣ್ಯತೆ ಹೊಂದುವ ಮೂಲಕ ಉತ್ತಮ ಶಿಕ್ಷಕರೆನಿಸಿಕೊಂಡಿರುವ ಉ.ರಾ.ನಾಗೇಶ್ ನಿವೃತ್ತಿ ನಂತರ ಚಿತ್ರಕಲಾ ಕ್ಷೇತ್ರದಲ್ಲಿ ಇನ್ನೂ ಉತ್ತಮ ಸಾಧನೆ ಮಾಡಲಿ ಎಂದರು.
ಜಿ.ಪಂ. ಶಿಕ್ಷಣ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಸರಳ ಸಜ್ಜನ ವ್ಯಕ್ತಿತ್ವ ಹೊಂದಿದ್ದ ಉ.ರಾ.ನಾಗೇಶ್ ಅವರು ಚಿತ್ರಕಲಾ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಅನನ್ಯವಾಗಿದೆ ಎಂದು ಬಣ್ಣಿಸಿದರು. ನಿವೃತ್ತಿ ನಂತರ ನಾಗೇಶ್ ಅವರು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಲಿ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಉ.ರಾ.ನಾಗೇಶ್, ವೃತ್ತಿ ಜೀವನದ ಯಶಸ್ವಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಪ್ರೌಢಶಾಲಾ ವಿಭಾಗದ ಪ್ರಾಂಶುಪಾಲ ವೈ.ಎಸ್. ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ಮಡಿಕೇರಿ ಕ್ಷೇತ್ರ ಶಿಕ್ಷಣ ಅಧಿಕಾರಿ ಡಾ ಬಿ.ಸಿ.ದೊಡ್ಡೇಗೌಡ, ಉಪ ಯೋಜನಾ ಸಮನ್ವಯಾಧಿಕಾರಿ ಸೌಮ್ಯ,ಡಯಟ್ ನ ಹಿರಿಯ ಉಪನ್ಯಾಸಕ ಶಿವಕುಮಾರ್, ಚಿತ್ರದುರ್ಗ ಡಯಟ್ ನ ಉಪನ್ಯಾಸಕ ಸಿದ್ದೇಶಿ, .ಆರ್.ಸಿ.ಜಿ.ಎಂ.ಹೇಮಂತ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ ಸದಾಶಿವಯ್ಯ ಎಸ್.ಪಲ್ಲೇದ್ , ವಿಷಯ ಪರಿವೀಕ್ಷಕಿ ಬಿಂದು, ಕಾಲೇಜಿನ ಪ್ರಾಂಶುಪಾಲ ನಾಗೇಶ್, ನಿವೃತ್ತ ಪ್ರಾಂಶುಪಾಲ ಸುರೇಶ್ ಬಾಬು, ಮೈಸೂರು ಸರ್ಕಾರಿ ಪಿಯೂ ಕಾಲೇಜಿನ ಪ್ರಾಂಶುಪಾಲ ಪಿ.ಎಸ್.ಜಾನ್, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್, ಕಾರ್ಯದರ್ಶಿ ಎಚ್.ಜೆ.ಕುಮಾರ್, ಸಂಘಟನಾ ಕಾರ್ಯದರ್ಶಿ ದಯಾನಂದ ಪ್ರಕಾಶ್, ಕೋಶಾಧಿಕಾರಿ ಎ.ಸಿ.ಮಂಜುನಾಥ್, ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಮೊರಾರ್ಜಿ ಶಾಲೆಯ ಪ್ರಾಂಶುಪಾಲ ಕೆ.ಪ್ರಕಾಶ್, ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಆದಂ, ಸದಸ್ಯರು, ಶಿಕ್ಷಣ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು, ವಿವಿಧ ಶಾಲಾ ಮುಖ್ಯಸ್ಥರು, ಶಿಕ್ಷಕರು ಇದ್ದರು.
ಶಾಲೆಯ ಉಪ ಪ್ರಾಂಶುಪಾಲ ವೈ.ಎಸ್. ಪರಮೇಶ್ವರಪ್ಪ ಮತ್ತು ಶಿಕ್ಷಕರು ನಾಗೇಶ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದರು. ಕೂಡಿಗೆ ಡಯಟ್ ಸೇರಿದಂತೆ ಶಿಕ್ಷಣ ಇಲಾಖೆಯ ವಿವಿಧ ಸ್ತರದ ಅಧಿಕಾರಿಗಳು ಹಾಗೂ ವಿವಿಧ ಶಾಲೆಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.